ಶೃಂಗೇರಿ: ಪಟ್ಟಣದ ಹೊರವಲಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 169ರ ರಸ್ತೆ ಅಭಿವೃದ್ಧಿಯಾಗುತ್ತಿದ್ದು ಈ ಭಾಗದಲ್ಲಿ ಬರುವ ನಿವಾಸಿಗಳಿಗೆ ಪರಿಹಾರ ಇನ್ನೂ ಮರೀಚಿಕೆಯಾಗಿದೆ. ಹೆದ್ದಾರಿ ಪ್ರಾಧಿಕಾರ ಪರಿಹಾರ ನೀಡಿ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಪಟ್ಟಣದ ಗೌರಿಶಂಕರ್ ಸಭಾಂಗಣದಲ್ಲಿ ಶನಿವಾರ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಗ್ರಾಮಸ್ಥರು ಶಾಸಕರಿಗೆ ಅಹವಾಲು ಸಲ್ಲಿಸಿದರು. ಕಳೆದ ಎರಡು ವರ್ಷದಿಂದ ಪ್ರಗತಿ ಕಾರ್ಯ ನಡೆಯುತ್ತಿದ್ದರೂ ಇನ್ನೂ ಭೂಸ್ವಾಧೀನ ಪ್ರಕ್ರಿಯೆ ನಡೆದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು. ಇದಕ್ಕೆ ಉತ್ತರಿಸಿದ ಶಾಸಕ ಟಿ.ಡಿ.ರಾಜೇಗೌಡ, ರಸ್ತೆಗೆ ಭೂಸ್ವಾಧೀನ ಮಾಡಿಕೊಳ್ಳುವ ಮುನ್ನ ಸ್ಥಳದ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಬೇಕು. ವಿನಾಕಾರಣ ತೊಂದರೆ ನೀಡದೆ ತ್ವರಿತಗತಿಯಲ್ಲಿ ಪರಿಹಾರ ನೀಡಬೇಕು ಎಂದರು.
ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ ಪೂಜಾರಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಿಂದ ಸರಬರಾಜಾಗುತ್ತಿರುವ ಕುಡಿಯುವ ನೀರು ತುಂಗಾ ನದಿಯಿಂದ ನೇರವಾಗಿ ಸರಬರಾಜು ಆಗುತ್ತಿದೆ. ಶುದ್ಧ ಕುಡಿಯುವ ನೀರು ಪೂರೈಸಲು ಅಗತ್ಯ ಫಿಲ್ಟರ್ ವ್ಯವಸ್ಥೆ ಆಗಬೇಕು. ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಸ್ವತ್ತಿನ ಸಮಸ್ಯೆ ಆಗುತ್ತಿದ್ದು ಸಾರ್ವಜನಿಕರಿಗೆ ದಾಖಲೆ ನೀಡಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ದಾಖಲೆ ನೀಡಲು ವಿಳಂಬ ಮಾಡುತ್ತಿದ್ದು ದಾಖಲೆಯನ್ನು ಶೀಘ್ರ ನೀಡುವಂತೆ ಶಾಸಕರಲ್ಲಿ ಮನವಿ ಮಾಡಿದರು.
ನಾಗರಾಜ ಶೆಟ್ಟಿ ಮಾತನಾಡಿ, ಕಸ ವಿಲೇವಾರಿಗೆ ಸೂಕ್ತ ಸ್ಥಳವಿಲ್ಲದೆ ತೊಂದರೆಯಾಗುತ್ತಿದೆ. ಸೂಕ್ತ ಜಾಗವನ್ನು ಕಂದಾಯ ಇಲಾಖೆ ಮಾಡಿಕೊಡಬೇಕು ಎಂದು ಹೇಳಿದರು.
ಮಂಜುನಾಥ್ ಮಾತನಾಡಿ, ಕೆಡಿಪಿ ಸಭೆಯಲ್ಲಿ ಎಲ್ಲ ಗ್ರಾಪಂ ಅಧ್ಯಕ್ಷರು ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು. ಸಭೆಯಲ್ಲಿ ತಹಸೀಲ್ದಾರ್ ಗೌರಮ್ಮ, ತಾಪಂ ಇಒ ಸುದೀಪ್, ಎಇಇ ಮಂಜುನಾಥ್, ದೀಪಕ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.