ನ್ಯೂಸ್

‘ ಬಿಜೆಪಿ ಕಾಲದ ಅನುದಾನ ವಾಪಸ್ ಪಡೆದಂತೆ ಪತ್ನಿಗೆ ಕೊಟ್ಟ ಸೈಟು ವಾಪಸ್ ಕೊಟ್ಬಿಡಿ !’

ಬೆಂಗಳೂರು: ‘ಬಿಜೆಪಿ ಕಾಲದ ಅನೇಕ ನಿರ್ಧಾರ, ಆದೇಶ, ಟೆಂಡರ್, ಅನುದಾನ ವಾಪಸ್ ಪಡೆದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಪತ್ನಿಗೆ ಹಂಚಿಕೆಯಾದ ನಿವೇಶನ ವಾಪಸ್ ಕೊಟ್ಬಿಡಿ !’ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ಕುಮಾರ್ ತಿರುಗೇಟು ನೀಡಿದ ಪರಿಯಿದು.

ಪಕ್ಷದ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಮೈಸೂರು ಮುಡಾದ ನಿವೇಶನಗಳ ಹಂಚಿಕೆ ಅಕ್ರಮದ ದಾಖಲೆಗಳನ್ನು ಮುಚ್ಚಿಡಲಾಗದು. ಬಿಜೆಪಿ ಆಡಳಿತ ಕಾಲದಲ್ಲಿ ನಮಗೆ ನಿವೇಶನ ಕೊಟ್ಟಿದ್ದಾರೆ ಎಂದು ಸಮಜಾಯಿಷಿ ನೀಡುವುದು ಸಿಎಂಗೆ ಶೋಭೆ ತರುವುದಿಲ್ಲ ಎಂದರು.

ಸಿಎಂ ಕುಟುಂಬದವರು ನಿವೇಶನ ಪಡೆದಿರುವುದು ದಾಖಲೆಗಳಲ್ಲಿ ದೃಢಪಟ್ಟಿದೆ. ಬಿಜೆಪಿ ಕಾಲದ ಅನೇಕ ನಿರ್ಧಾರ, ಅನುದಾನ ಹಂಚಿಕೆ, ಟೆಂಡರ್, ಯೋಜನೆ ತಡೆದಿದ್ದಾರೆ ಇಲ್ಲವೇ ವಾಪಸ್ ಪಡೆದಿದ್ದಾರೆ.

ಅದೇ ರೀತಿ ತಮ್ಮ ಪತ್ನಿಗೆ ನಿವೇಶನ ಹಂಚಿಕೆಯಾಗಿದ್ದನ್ನು ತಡೆಯಬೇಕಿತ್ತು ಅಥವಾ ವಾಪಸ್ ಪಡೆಯಬೇಕಾಗಿತ್ತು. ನಿವೇಶನವನ್ನು ವಾಪಸ್ ಕೊಟ್ಟು, ಅವ್ಯವಹಾರದ ಸಮಗ್ರ ತನಿಖೆಗೆ ಆದೇಶಿಸುವ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ನಿಲುವು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದು ವಿ.ಸುನಿಲ್‌ಕುಮಾರ್ ಒತ್ತಾಯಿಸಿದರು.

ಸಿಎಂ ಮೂಗಿನಡಿಯೇ ಅಕ್ರಮ

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹು ಕೋಟಿ ರೂ.ಗಳು ಅಕ್ರಮವಾಗಿ ಬೇರೆ ಖಾತೆಗಳಿಗೆ ವರ್ಗಾವಣೆಯಾಯಿತು. ಇದೀಗ ಮುಡಾದ ಸಾವಿರಾರು ಕೋಟಿ ರೂ. ಮೌಲ್ಯದ ನಿವೇಶನಗಳ ಹಂಚಿಕೆ ಅಕ್ರಮ ಹೊರಬಿದ್ದಿದೆ.

ಹಣಕಾಸು ಇಲಾಖೆ ಅನುಮೋದನೆಯಿಲ್ಲದೆ ನಿಗಮ ಬಹು ಕೋಟಿ ರೂ. ವರ್ಗಾವಣೆಗೆ ಕೈಹಾಕದು. ಹಾಗೆಯೇ ಸಿಎಂ ತವರು ಜಿಲ್ಲೆಯ ಮುಡಾದಿಂದ ನಿಯಮಬಾಹಿರ ನಿವೇಶನ ಹಂಚಿದ್ದರಲ್ಲಿ ಸಿಎಂ ಪತ್ನಿಯದೂ ಸೇರಿದೆ.

ಎರಡೂ ಅಕ್ರಮಗಳು ಸಿಎಂ ಸಿದ್ದರಾಮಯ್ಯ ಮೂಗಿನಡಿಯೇ ನಡೆದಿವೆ. ಹೀಗಾಗಿ ಸಿಎಂ ಸ್ಥಾನದಲ್ಲಿ ಮುಂದುವರಿಯುವ ನೈತಿಕತೆಯನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದಾರೆ. ಹಗರಣಗಳ ನಿಜಾಂಶ ಹೊರಬರಲು ಸಮಗ್ರ ತನಿಖೆ ಸೂಕ್ತವೆಂದು ವಿ.ಸುನಿಲ್‌ಕುಮಾರ್ ಪುನರುಚ್ಚರಿಸಿದರು.