ಸಾಗುವಳಿದಾರರಿಗೆ ಭೂಮಿ ಮರಳಿಸುವಂತೆ ಒತ್ತಾಯಿಸಿ ಕಲ್ಲಿಹಾಳ್ ಹಾಗೂ ಚಂದನಕೆರೆ ರೈತರು ಡಿಎಸ್‌ಎಸ್ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪರಮೇಶ್, ರುದ್ರೇಶ್, ಶೇಷಾದ್ರಿ, ಪುಟ್ಟರಾಜು, ಪ್ರಸನ್ನ ಮುಂತಾದವರಿದ್ದರು. 
ನ್ಯೂಸ್

ಸಾಗುವಳಿದಾರರಿಗೆ ಭೂಮಿ ವಾಪಸ್ ಕೊಡಿ

ಶಿವಮೊಗ್ಗ: ಹೊಳೆಹೊನ್ನೂರು ಹೋಬಳಿಯ ಚಂದನಕೆರೆ ಸರ್ವೇ ನಂ.12ರಲ್ಲಿ ಉಳುಮೆ ಮಾಡುತ್ತಿದ್ದ ದಲಿತರ ಭೂಮಿಯನ್ನು ಎಂಪಿಎಂ ಆಡಳಿತ ಮಂಡಳಿ ಅತಿಕ್ರಮಿಸಿಕೊಂಡಿದ್ದಾರೆ. ಇದನ್ನು ಮತ್ತೆ ಸಾಗುವಳಿದಾರರಿಗೆ ನೀಡುವಂತೆ ಒತ್ತಾಯಿಸಿ ಸ್ಥಳೀಯರು ಮಂಗಳವಾರ ಡಿಎಸ್‌ಎಸ್ ನೇತೃತ್ವದಲ್ಲಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕಲ್ಲಿಹಾಳ್ ಗ್ರಾಮದ 20 ಮಂದಿ ದಲಿತರು ಹಾಗೂ ಚಂದನಕೆರೆಯ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಸಮುದಾಯಕ್ಕೆ ಸೇರಿದ 21 ಮಂದಿ ತಲಾ ಎರಡು ಎಕರೆಯಲ್ಲಿ ಉಳುಮೆ ಮಾಡುತ್ತಿದ್ದರು. ಭೂಮಿ ಹಕ್ಕಿಗಾಗಿ ಇವರೆಲ್ಲರೂ ಫಾರ್ಮ್ 50 ಹಾಗೂ 53ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಭೂಮಿಯನ್ನು 30 ವರ್ಷಗಳ ಹಿಂದೆ ಸಾಗುವಳಿದಾರರಿಂದ ಕಿತ್ತುಕೊಂಡು ಎಂಪಿಎಂಗೆ ಹಸ್ತಾಂತರಿಸಲಾಗಿತ್ತು. ಈ ಭೂಮಿಯನ್ನು ಮರಳಿ ನೀಡುವಂತೆ ಕಳೆದೊಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಜಿಲ್ಲಾಡಳಿತ ಸ್ಪಂದಿಸಿಲ್ಲ. ಕೂಡಲೇ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡು ಭೂಮಿಯನ್ನು ನೈಜ ಸಾಗುವಳಿದಾರರಿಗೆ ನೀಡಬೇಕೆಂದು ಒತ್ತಾಯಿಸಿದರು.
ಡಿಎಸ್‌ಎಸ್ ಶಿವಮೊಗ್ಗ ತಾಲೂಕು ಸಂಚಾಲಕ ಪರಮೇಶ್ ಸೂಗೂರು, ಪ್ರಮುಖರಾದ ಶಿವಕುಮಾರ್, ರುದ್ರೇಶ್, ಪ್ರಸನ್ನ, ಪುಟ್ಟರಾಜು, ಶೇಷಾದ್ರಿ ಪ್ರತಿಭಟನೆಯಲ್ಲಿದ್ದರು.