ರಿಪ್ಪನ್‌ಪೇಟೆ ಪಟ್ಟಣದ ಚಿಪ್ಪಿಗರಕೆರೆಯನ್ನು ಜಿಪಂ ಯೋಜನಾ ನಿರ್ದೇಶಕಿ ಆರ್.ಬಿ.ನಂದಿನಿ ಪರಿಶೀಲಿಸಿದರು. ನಾಗರಾಜ್, ಸುಧೀಂದ್ರ ಪೂಜಾರಿ, ಗಣಪತಿ, ಮಲ್ಲಿಕಾರ್ಜುನ, ಮಂಜುಳಾ ಇತರರಿದ್ದರು.  
ನ್ಯೂಸ್

ಚಿಪ್ಪಿಗರ ಕೆರೆ ಕಾಮಗಾರಿ ವರದಿ ನೀಡಿ

ರಿಪ್ಪನ್‌ಪೇಟೆ: ಪಟ್ಟಣದ ಹೊಸನಗರ ರಸ್ತೆಯ ಚಿಪ್ಪಿಗರ ಕೆರೆಯನ್ನು ಗ್ರಾಮಾಡಳಿತವು 15ನೇ ಹಣಕಾಸು ಅನುದಾನದಲ್ಲಿ ಅಭಿವೃದ್ಧಿ ಪಡಿಸಿದ ಕಾಮಗಾರಿ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಅಭಿಯಂತರರಿಗೆ ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಆರ್.ಬಿ.ನಂದಿನಿ ಸೂಚಿಸಿದರು.

ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ವಾರ್ಷಿಕ ಜಮಾಬಂದಿ ನಡೆಯಿತು. ಚಿಕ್ಕಬೀರನ ಕೆರೆಯನ್ನು ಒಂದು ವರ್ಷದ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ನಮ್ಮೂರು-ನಮ್ಮಕೆರೆ ಯೋಜನೆ ಮತ್ತು ಗ್ರಾಮಸ್ಥರ ನೆರವಿನಿಂದ 13 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆದು ದಂಡೆ ನಿರ್ಮಿಸುವ ಕಾಮಗಾರಿ ಅನುಷ್ಠಾನಗೊಳಿಸಲಾಗಿತ್ತು. ಗ್ರಾಮಾಡಳಿತವು ಇದೇ ಕೆರೆ ಕಾಮಗಾರಿಗೆಂದು 7 ಲಕ್ಷ ರೂ. ಅಂದಾಜು ಮೊತ್ತವನ್ನು ಉಳಿಸಿಕೊಂಡು ಕಾಮಗಾರಿಗಾಗಿ 4.98 ಲಕ್ಷ ರೂ. ವೆಚ್ಚ ಮಾಡಿರುವುದಾಗಿ ಜಮಾಬಂದಿಯಲ್ಲಿ ಪ್ರಸ್ತಾಪಿಸಿದಾಗ ಆಕ್ಷೇಪವೆತ್ತಿದ ಗ್ರಾಮಸ್ಥರು ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು. ಯೋಜನಾ ನಿರ್ದೇಶಕರು ಸಭೆಯಲ್ಲಿದ್ದ ಜಿಪಂ ಅಭಿಯಂತ ಓಂಕಾರಪ್ಪ ಅವರಿಗೆ ಸಮಗ್ರ ವರದಿ ನೀಡಲು ಸೂಚನೆ ನೀಡಿದರು.

ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ವಿವಿಧ ಕಾಮಗಾರಿಗಳ ಬಗ್ಗೆ ಗ್ರಾಮಾಡಳಿತ ಲೆಕ್ಕಪತ್ರ ಮಂಡಿಸಿತು. ನಂತರ ಚಿಪ್ಪಿಗರಕೆರೆಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲಿಸಿದರು. ಪಿಡಿಒ ನಾಗರಾಜ್, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ಗಣಪತಿ, ಮಲ್ಲಿಕಾರ್ಜುನ, ಮಂಜುಳಾ ಇತರರಿದ್ದರು.