ಎನ್.ಆರ್.ಪುರ ತಾಲೂಕಿನ ಬಿ.ಎಚ್.ಕೈಮರದಲ್ಲಿ ಕನ್ನಡದಲ್ಲಿ ಪೂರ್ಣಾಂಕ ಸಾಧನೆ ಮಾಡಿದ ದೇವಯಾನಿ, ಮಾನ್ಯಾ, ನೇಹಾ ಅವರನ್ನು ಸನ್ಮಾನಿಸಲಾಯಿತು. ಕೆಂಪನಹಳ್ಳಿ ಅಶೋಕ್, ಎನ್.ಎಂ.ಕಾಂತರಾಜ್, ಪ್ರೇಮಾ ಶ್ರೀನಿವಾಸ್, ಭಾಗ್ಯಾ ನಂಜುಂಡಸ್ವಾಮಿ ಇತರರಿದ್ದರು.  
ನ್ಯೂಸ್

ಕನ್ನಡಿಗರಿಗೆ ಶೇ.80 ಮೀಸಲಾತಿ ನೀಡಿ

ಎನ್.ಆರ್.ಪುರ: ಕರ್ನಾಟಕದಲ್ಲಿ ಕನ್ನಡಿಗರಿಗೆ ಶೇ.80 ಉದ್ಯೋಗ ಮೀಸಲಿಡಬೇಕು ಎಂದು ಮುಂದಿನ ದಿನಗಳಲ್ಲಿ ಕರವೇಯಿಂದ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ತಿಳಿಸಿದರು.
ಬಿ.ಎಚ್.ಕೈಮರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದಿಂದ ಏರ್ಪಡಿಸಿದ್ದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡರ ಜನ್ಮದಿನ ಹಾಗೂ ನೂತನ ಜಿಲ್ಲಾಧ್ಯಕ್ಷರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರವೇ ಸದಾ ಕನ್ನಡಪರ ಚಿಂತನೆ ನಡೆಸುತ್ತಿದೆ. ಕನ್ನಡಿಗರಿಗೆ ಅನ್ಯಾಯವಾದರೆ, ಜಲ, ಭಾಷೆ ವಿಷಯದಲ್ಲಿ ಸಮಸ್ಯೆ ಉಂಟಾದರೆ ಎಲ್ಲರಿಗಿಂತ ಮುಂಚೆ ಕರವೇ ಸದಸ್ಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಾರೆ. ನಾರಾಯಣಗೌಡ ಜೈಲಿನಲ್ಲಿ ಇದ್ದಾಗಲೂ ಕನ್ನಡಪರ ಚಿಂತನೆ ನಡೆಸುತ್ತಿದ್ದರು ಎಂದರು.
ಮಾಜಿ ಅಧ್ಯಕ್ಷ ಎನ್.ಎಂ.ಕಾಂತರಾಜ್ ಮಾತನಾಡಿ, ಕರ್ನಾಟಕ ರಕ್ಷಣಾ ವೇದಿಕೆ ಹಿಂದಿನಿಂದಲೂ ಕನ್ನಡ ಭಾಷೆ, ನೆಲ, ಜಲ ಉಳಿವಿಗಾಗಿ ಹೋರಾಟ ಮಾಡಿಕೊಂಡು ಬಂದ ಸಂಘಟನೆಯಾಗಿದೆ ಎಂದು ಹೇಳಿದರು.
ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಾ ಶ್ರೀನಿವಾಸ್ ಮಾತನಾಡಿ, ಸಮಾಜಕ್ಕಾಗಿ ಹೋರಾಟ ಮಾಡುವ ಸಂಘಟನೆಗಳಿಗೆ ಸಮಾಜದಲ್ಲಿ ಸಹಕಾರ ನೀಡುವುದಕ್ಕಿಂತ ಸಮಸ್ಯೆ ನೀಡುವವರೇ ಹೆಚ್ಚಾಗಿದ್ದಾರೆ. ಆದರೂ ಘಟಕದ ಸದಸ್ಯೆರೆಲ್ಲರೂ ಒಗ್ಗೂಡಿ ಕನ್ನಡಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದೇವೆ ಎಂದರು.
ಕೆಂಪನಹಳ್ಳಿ ಅಶೋಕ್ ಅವರನ್ನು ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡದಲ್ಲಿ ಪೂರ್ಣಾಂಕ ಗಳಿಸಿದ ದೇವಯಾನಿ, ಮಾನ್ಯಾ ಹಾಗೂ ನೇಹಾ ಅವರನ್ನು ಸನ್ಮಾನಿಸಲಾಯಿತು.
ತಾಲೂಕು ಕರವೇ ಅಧ್ಯಕ್ಷ ಹರ್ಷ, ಲೇಖಕಿ ಭಾಗ್ಯಾ ನಂಜುಂಡಸ್ವಾಮಿ, ಕರವೇ ಗೌರವ ಅಧ್ಯಕ್ಷ ರಜಿ, ಗ್ರಾಪಂ ಸದಸ್ಯರಾದ ಸಾಜು, ವಸಂತ ಕೋಟ್ಯಾನ್, ಕರವೇ ಸದಸ್ಯರಾದ ಬಿನು, ಸಂದೀಪ್, ಶಾಂತಾ, ವಾಸಿಂ, ಜಾನಕಮ್ಮ ಮತ್ತಿತರರಿದ್ದರು. ಕಲಾವಿದರಾದ ಅಭಿನವ ಗಿರಿರಾಜ್, ಭಾನುಮತಿ, ಶ್ರುತಿ ಕನ್ನಡ ಗೀತೆಗಳನ್ನು ಹಾಡಿದರು.