ನರೇಗಾ ಕೂಲಿ ಕೆಲಸ ನೀಡಬೇಕು ಎಂದು ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿಗಳು ಅರಬಿಳಚಿ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರು. ಚಂದ್ರಪ್ಪ, ವೀರೇಶ್, ಮಂಜಮ್ಮ, ಲತಾ, ಪ್ರೇಮಾ ಇತರರಿದ್ದರು. 
ನ್ಯೂಸ್

ನರೇಗಾದಡಿ 100 ದಿನ ಕೆಲಸ ಕೊಡಿ

ಹೊಳೆಹೊನ್ನೂರು: ನರೇಗಾ ಯೋಜನೆಯಡಿ ಬಡ ಹಾಗೂ ಕೂಲಿ ಕಾರ್ಮಿಕರಿಗೆ 100 ದಿನ ಉದ್ಯೋಗ ನೀಡುವಂತೆ ಆಗ್ರಹಿಸಿ ಅರಬಿಳಚಿ ಗ್ರಾಮ ಪಂಚಾಯಿತಿ ಕಚೇರಿ ಎದುರು ಮಾನವ ಹಕ್ಕುಗಳ ಹೋರಾಟ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.

ಅಧಿಕಾರಿಗಳ ನಿರ್ಲಕ್ಷೃದಿಂದ ಕೇಂದ್ರ ಸರ್ಕಾರದ ಉತ್ತಮ ಯೋಜನೆಯೊಂದು ಹಳ್ಳ ಹಿಡಿಯುತ್ತಿದೆ. ಅಗತ್ಯ ವಸ್ತುಗಳ ದರ ದಿನೇದಿನೆ ಏರಿಕೆಯಾಗುತ್ತಿದೆ. ಬಡ ಹಾಗೂ ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಜೀವನ ನಡೆಸುವುದು ಅಸಾಧ್ಯವಾಗಿದೆ. ಇಂತಹ ಸಂದರ್ಭದಲ್ಲಿ ವರ್ಷಕ್ಕೆ 100 ದಿನ ಕಾಲ ನೀಡುವ ಉದ್ಯೋಗವನ್ನು ಗ್ರಾಪಂ ಆಡಳಿತವು ಮೊಟಕುಗೊಳಿಸಿ ಗಾಯದ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.

ಅರಬಿಳಚಿ ಗ್ರಾಪಂ ವ್ಯಾಪ್ತಿಯಲ್ಲಿ 30-40 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವ ಬಡವರಿಗೆ ನಿವೇಶನವನ್ನೂ ನೀಡಿಲ್ಲ. ಯಾವುದೇ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳನ್ನು ನಿಯಮದ ಪ್ರಕಾರ ನಡೆಸುತ್ತಿಲ್ಲ. ಸರ್ಕಾರದ ಸೌಲಭ್ಯಗಳು ವಸತಿ ಯೋಜನೆ, ಸಾಲ ಸೌಲಭ್ಯ, ಇನ್ನಿತರ ಯಾವುದೇ ಯೋಜನೆಗಳನ್ನು ಗ್ರಾಮದ ಜನರಿಗೆ ಹಾಗೃತಿ ಮೂಡಿಸದೆ ಕೆಲವೇ ಜನರು ಸೌಲಭ್ಯಗಳನ್ನು ಪಡೆಯುತ್ತಿದ್ದು, ನಿಜವಾದ ಬಡವರಿಗೆ ಕಾನೂನಿನ ಅರಿವಿಲ್ಲದೆ, ಜಾಗೃತಿ ಮೂಡಿಸದೆ ಗ್ರಾಮ ಪಂಚಾಯಿತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇ-ಸ್ವತ್ತು, ಖಾತೆ, ಪೌತಿ ಖಾತೆ, ಪಿಂಚಣಿ ಸೌಲಭ್ಯಗಳ ಬಗ್ಗೆ ಯಾವುದೇ ಗ್ರಾಮ ಸಭೆಯಲ್ಲಿ ಸಾರ್ವಜನಿಕರಿಗೆ ತಿಳಿಸದೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ದೂರಿದರು.

ಮನವಿ ಸ್ವೀಕರಿಸಿ ಮಾತನಾಡಿದ ಭದ್ರಾವತಿ ತಾಪಂ ಇಒ ಗಂಗಣ್ಣ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನರೇಗಾ ಕೆಲಸ ನೀಡಲು ಕೂಡಲೇ ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಚಂದ್ರಪ್ಪ, ವೀರೇಶ್, ಮಂಜಮ್ಮ, ಲತಾ, ಪ್ರೇಮಾ, ಕರಿಯಮ್ಮ, ಆಶಾ, ಗೌರಮ್ಮ, ಜಯಾ, ಗಂಗಾಧರ, ನಾಗರಾಜ್, ರೂಪಾ, ಗೀತಾ, ಯಶೋದಮ್ಮ ಇತರರಿದ್ದರು.