ವಾಷಿಂಗ್ಟನ್: ಇಂದು ಪ್ರೇಮಿಗಳ ದಿನ. ಪ್ರೀತಿಯಲ್ಲಿರುವವರು, ದಂಪತಿಗಳು ತಮ್ಮ ಪ್ರಿಯ ಜೀವಗಳಿಗೆ ಗಿಫ್ಟ್ ಕೊಟ್ಟು ಈ ದಿನವನ್ನು ಆಚರಿಸುತ್ತಿದ್ದಾರೆ. ಆದರೆ ಈ ಒಂದು ಜೋಡಿ ಯಾವ ರೀತಿಯಲ್ಲಿ ಪ್ರೇಮಿಗಳ ದಿನವನ್ನು ಆಚರಿಸಿದೆ ಎಂದು ಕೇಳಿದರೆ ನೀವು ನಗುತ್ತೀರ. ಪ್ರಿಯತಮೆಯ ಸರ್ಪೈಸ್ ಗಿಫ್ಟ್ ಕಥೆ ನಿಮಗಾಗಿ...
ಅಮೆರಿಕದ ಟಿಕ್ಟಾಕ್ ಸ್ಟಾರ್ ಗ್ಲೋರಿಯಾ ತನ್ನ ಪ್ರಿಯತಮನಿಗೆ ಪ್ರೇಮಿಗಳ ದಿನದ ಪ್ರಯುಕ್ತ ವಿಶೇಷವಾದ ಉಡುಗೊರೆಯೊಂದನ್ನು ಕೊಟ್ಟಿದ್ದಾಳೆ. ಪ್ರಾಣಕ್ಕಿಂತ ಹೆಚ್ಚಾಗಿ ತಾನು ಪ್ರೀತಿಸುತ್ತಿದ್ದರೂ, ಪ್ರಿಯತಮ ಆಕೆಯನ್ನು ಕಡೆಗಣಿಸಿ, ಇನ್ಸ್ಟಾಗ್ರಾಂನಲ್ಲಿ ಬೇರೆ ಹೆಣ್ಣು ಮಕ್ಕಳ ಫೋಟೋಗಳಿಗೆ ಲೈಕ್ ಕೊಡುತ್ತಿದ್ದನಂತೆ. ಆ ಕಾರಣಕ್ಕಾಗಿ ಆಕೆ ಬೇರೆಯದ್ದೇ ಪ್ಲ್ಯಾನ್ ಒಂದನ್ನು ಮಾಡಿದ್ದಾಳೆ. ಉಪಾಯವಾಗಿ ಪ್ರಿಯತಮನ ಫೋನ್ ತೆಗೆದುಕೊಂಡು ಅದರಲ್ಲಿ ಆತ ಇನ್ಸ್ಟಾಗ್ರಾಂನಲ್ಲಿ ಯಾರು ಯಾರಿಗೆ ಲೈಕ್ ಮಾಡಿದ್ದಾನೆ ಎಂದು ನೋಡಿದ್ದಾಳೆ. ಅದನ್ನೆಲ್ಲ ಸ್ಕ್ರೀನ್ಶಾಟ್ ತೆಗೆದುಕೊಂಡು ತನಗೆ ಶೇರ್ ಮಾಡಿಕೊಂಡಿದ್ದಾಳೆ.
ಪ್ರೇಮಿಗಳ ದಿನಕ್ಕೆ ವಿಶೇಷವಾಗಿ ಒಂದು ಗಿಫ್ಟ್ ಬಾಕ್ಸ್ ರೀತಿಯಲ್ಲಿ ರೆಡಿ ಮಾಡಿ ಅದಕ್ಕೆ ಆ ಫೋಟೋಗಳನ್ನೆಲ್ಲ ಕಡ್ಡಿ ಹಾಕಿ ಸಿಕ್ಕಿಸಿದ್ದಾಳೆ. ಪ್ರಿಯತಮನಿಗೆ ಅದನ್ನು ನೀಡಿದ್ದಾಳೆ. ಆತನ ರಿಯಾಕ್ಷನ್ ವಿಡಿಯೋವನ್ನು ಮಾಡಿ ಶೇರ್ ಮಾಡಿದ್ದಾಳೆ. ಆ ವಿಡಿಯೋವನ್ನು ನೋಡಿರುವ ನೆಟ್ಟಿಗರಲ್ಲಿ ಕೆಲ ಹೆಣ್ಣ ಮಕ್ಕಳು ತಾವೂ ತಮ್ಮ ಪ್ರಿಯಕರನಿಗೆ ಇದೇ ರೀತಿ ಮಾಡಲು ಬಯಸುವುದಾಗಿ ಹೇಳಿಕೊಂಡಿದ್ದಾರೆ. ಪ್ರೀತಿಸಿದ ಮೇಲೆ ಇನ್ಸ್ಟಾಗ್ರಾಂನಲ್ಲಿ ಬೇರೆಯವರ ಫೋಟೋ ಲೈಕ್ ಮಾಡುವಂತಿಲ್ಲ ಎನ್ನುವುದಾದರೆ ನಮಗೆ ಪ್ರೀತಿಯೇ ಬೇಡ ಎಂದು ಅನೇಕ ಗಂಡು ಮಕ್ಕಳು ಗೋಳಿಟ್ಟಿದ್ದಾರೆ. (ಏಜೆನ್ಸೀಸ್)