ಬೆಂಗಳೂರು: ವರ್ತೂರು ಬಳಿಯ ಪ್ರೆಸ್ಟೀಜ್ ಲೇಕ್ ಸೈಡ್ ಹೆಬಿಬಾಬ್ ಅಪಾರ್ಟ್‌ಮೆಂಟ್‌ನ ಈಜುಕೊಳದಲ್ಲಿ ವಿದ್ಯುತ್ ಸ್ಪರ್ಶಿಸಿ 9 ವರ್ಷದ ಬಾಲಕಿ ಸಾವು ಪ್ರಕರಣ ಸಂಬಂಧ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹೆಬಿಬಾಬ್ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘದ ಅಧ್ಯಕ್ಷ ದೇಬಶಿಸ್ ಸಿನ್ಹಾ, ಜಾವೇದ್ ಸಫೀಕ್ ರಾಂ, ಸಂತೋಷ್ ಮಹಾರಾಣ, ಬಿಕಾಸ್ ಕುಮಾರ್ ಫೋರಿಡಾ, ಭಕ್ತ ಚರಣ್ ಪ್ರಧಾನ್, ಸುರೇಶ್ ಹಾಗೂಗೋವಿಂದ್ ಮಂಡಲ್ ಬಂಧಿತರು ಎಂದು ವೈಟ್‌ಫೀಲ್ಡ್ ಡಿಸಿಪಿ ಶಿವಕುಮಾರ್ ತಿಳಿಸಿದ್ದಾರೆ.
2023ರ ಡಿ. 28ರಂದು ಅಪಾರ್ಟ್‌ಮೆಂಟ್ ಆವರಣದ ಈಜುಕೊಳದಲ್ಲಿ ರಾಜೇಶ್ ಕುಮಾರ್ ಧಮೆರ್ಲಾ ದಂಪತಿಯ ಪುತ್ರಿ ಮಾನ್ಯ ಆಟವಾಡುವಾಗ ಮೃತಪಟ್ಟಿದ್ದಳು. ಈಜುಕೊಳದಲ್ಲಿ ವಿದ್ಯುತ್ ಪ್ರವಹಿಸಿರುವ ಬಗ್ಗೆ ಅಪಾರ್ಟ್‌ಮೆಂಟ್ ನಿರ್ವಹಣೆ ಹೊತ್ತಿರುವ ಸಂಘದ ಮತ್ತು ಎಲೆಕ್ಟ್ರಿಷಿಯನ್‌ಗೆ ಮಾಹಿತಿ ನೀಡಿದರು ಯಾವುದೇ ರೀತಿ ಸುರಕ್ಷತಾ ಕ್ರಮ ಜರುಗಿಸಲಿಲ್ಲ. ಇದರಿಂದಲೇ ತಮ್ಮ ಮಗಳಿಗೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾಳೆ ಎಂದು ಮೃತರ ತಂದೆ ದೂರಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಘಟನಾ ಸ್ಥಳ ಪರಿಶೀಲಿಸಿದಾಗ ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘದ ನಿರ್ಲಕ್ಷ್ಯಕ್ಕೆ ಪುರಾವೆ ಸಿಕ್ಕಿತು. ಈ ಮಾಹಿತಿ ಆಧರಿಸಿ ಸಂಘದ ಅಧ್ಯಕ್ಷ ಸೇರಿ 7 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.