ಬಿಹಾರ: ಪ್ರೀತಿ ಮಾಡುತ್ತಿದ್ದ ಪ್ರಿಯಕರನ ಮೇಲಿನ ಕೋಪದಿಂದ ಆತನ ಮರ್ಮಾಂಗವನ್ನೇ ಕತ್ತರಿಸಿ ಎಸೆದ ವಿಚಿತ್ರ ಘಟನೆ ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ವರದಿಯಾಗಿದೆ. ಆತನ ಗುಪ್ತಾಂಗವನ್ನು ಕಡಿದು, ಅವನ ದೇಹವನ್ನು ನಡುರಸ್ತೆಯಲ್ಲಿ ಎಸೆದ ಯುವತಿ ಸ್ಥಳದಿಂದ ಪರಾರಿಯಾಗಿದ್ದಾಳೆ.
ಯುವಕನನ್ನು ಅನಿಲ್ ಗೊಂಡ್ ಎಂದು ಗುರುತಿಸಲಾಗಿದ್ದು, ಸತ್ತುಹೋದ ಎನ್ನಲಾದ ವ್ಯಕ್ತಿ ಸದ್ಯ ಪ್ರಾಣಾಪಾಯದಿಂದ ಪಾರಾಗಿ, ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವೈದ್ಯರ ಪ್ರಕಾರ ಆತನ ಸ್ಥಿತಿ ಚಿಂತಾಜನಕವಾಗಿದೆ. ಮಹಿಳೆ ಯಾವ ಕಾರಣಕ್ಕೆ ಇಂತಹ ನಿರ್ಧಾರ ಕೈಗೊಂಡಳು ಎಂಬುದನ್ನು ಪೊಲೀಸರು ತನಿಖೆಯ ಮೂಲಕ ಹೊರತೆಗೆಯುವ ಪ್ರಯತ್ನದಲ್ಲಿದ್ದಾರೆ ಎಂದು ವರದಿಯಾಗಿದೆ.
ಸಂತ್ರಸ್ತ ಯುವಕನ ಸಹೋದರ ಪ್ರಮೋದ್ ಕುಮಾರ್ ಚೌಧರಿ ಮಾಹಿತಿ ಪ್ರಕಾರ, "ಪ್ರತಿದಿನ ಆಕೆಯ ಜತೆ ಅನಿಲ್ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದ. ಅಂದು ಅವಳು ತನ್ನ ಮನೆಗೆ ಬರಲು ಹೇಳಿದಳು. ಅದರಂತೆ ನನ್ನ ಸಹೋದರ ದುಮ್ರಾನ್‌ನಲ್ಲಿರುವ ಅವಳ ಮನೆಗೆ ಹೋಗಿದ್ದ. ಈ ವೇಳೆ ಸಂಚುಹೂಡಿದ್ದವಳು, ಆತನ ಮೇಲೆ ಹಲ್ಲೆ ನಡೆಸಿ, ಖಾಸಗಿ ಅಂಗಗಳನ್ನು ಕತ್ತರಿಸಿ, ದೇಹವನ್ನು ರಸ್ತೆಯಲ್ಲಿ ಬಿಸಾಡಿ ಪರಾರಿಯಾಗಿದ್ದಾಳೆ" ಎಂದಿದ್ದಾರೆ.
ತೀವ್ರ ನೋವಿನಿಂದ ಬಳಲುತ್ತಿದ್ದ ಸಂತ್ರಸ್ತನನ್ನು ಆಸ್ಪತ್ರೆಗೆ ಸರಿಯಾದ ಸಮಯಕ್ಕೆ ಸೇರಿಸಿದ್ದಕ್ಕೆ ಆತ ಪ್ರಾಣಪಾಯದಿಂದ ಬದುಕುಳಿದಿದ್ದಾನೆ ಎಂದು ವೈದ್ಯರು ತಿಳಿಸಿದ್ದು, ಸದ್ಯ ಬಕ್ಸಾರ್‌ನ ವಿಕೆ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎನ್ನಲಾಗಿದೆ. "ಘಟನೆಯ ಬಗ್ಗೆ ನಮಗೆ ಮಾಹಿತಿ ದೊರೆತ ತಕ್ಷಣ ನಾವು ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ" ಎಂದು ಡುಮ್ರಾನ್ ಪೊಲೀಸ್ ಅಧಿಕಾರಿ ಅನಿಶಾ ರಾಣಾ ಹೇಳಿದ್ದಾರೆ,(ಏಜೆನ್ಸೀಸ್).