ನ್ಯೂಸ್

ಅಪರೂಪಕ್ಕೆ ತಂದೆ ಬಳಿ ಖರೀದಿಸಿದ ಲಾಟರಿಯಿಂದ ಒಲಿಯಿತು ಅದೃಷ್ಟ: ಬಹುಮಾನದ ಮೊತ್ತ ಕೇಳಿದ್ರೆ ಹುಬ್ಬೇರಿಸ್ತೀರಾ!

ಆರೂರು: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ಯುವತಿಯೊಬ್ಬಳ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.

ಅಪರೂಪಕ್ಕೆ ತಂದೆಯಿಂದಲೇ ಲಾಟರಿ ಖರೀದಿ ಮಾಡಿದ್ದ ಯುವತಿಗೆ ಬರೋಬ್ಬರಿ 75 ಲಕ್ಷ ರೂ. ಹಣ ಪ್ರಥಮ ಬಹುಮಾನವಾಗಿ ಬಂದಿದೆ. ಅದೃಷ್ಟವಂತೆಯ ಹೆಸರು ಆಶ್ಲೆ. ಈಕೆಯ ತಂದೆ ಎನ್​.ಜೆ. ಅಗಸ್ಟಿನ್​ ಲಾಟರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇದೀಗ ಬಹುಮಾನ ಗೆದ್ದ ಹಿನ್ನೆಲೆಯಲ್ಲಿ ಆಶ್ಲೆ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಸ್ತ್ರೀ ಶಕ್ತಿ ಲಾಟರಿ ಕಂಪನಿ ಬಹುಮಾನವನ್ನು ಯುವತಿಗೆ ವಿತರಣೆ ಮಾಡಿದೆ.

ಬಹುಮಾನ ಒಲಿದು ಬಂದ ಎಸ್​ಜಿ 888030 ನಂಬರ್​ನ ಲಾಟರಿಯನ್ನು ಆಶ್ಲೆ ತನ್ನ ತಂದೆಯ ಲಾಟರಿ ಅಂಗಡಿಯಿಂದಲೇ ಖರೀದಿ ಮಾಡಿದ್ದಳು. ಎಂದಿನಂತೆ ಕೆಲಸಕ್ಕೆ ಹೋಗುವಾಗ ಅಪರೂಪಕ್ಕೆ ಲಾಟರಿ ತೆಗೆದುಕೊಂಡಿದ್ದಳು. ಇದೀಗ ಆಶ್ಲೆ ಬಹುಮಾನ ಹಣ ಪಡೆದಿದ್ದು, ಆಕೆಯ ತಂದೆ ಅಗಸ್ಟಿನ್​ ಸಹ ಕಮಿಷನ್​ ಪಡೆದಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಜಂಕ್ಷನ್​ ಬಳಿ ಇರುವ ಆರೂರು ದೇವಸ್ಥಾನದ ಹತ್ತಿರ ಕಳೆದ 10 ವರ್ಷಗಳಿಂದ ಅಗಸ್ಟಿನ್​ ಲಾಟರಿ ಅಂಗಡಿ ನಡೆಸುತ್ತಿದ್ದಾರೆ. ಮಗಳು ಆಶ್ಲೆ ಆರೂರಿನ ವ್ಯಾಪಾರ ಭವನದಲ್ಲಿ ಅಕೌಂಟೆಂಟ್​ ಆಗಿದ್ದಾರೆ. ಅಗಸ್ಟಿನ್​ನ ಮೂವರು ಮಕ್ಕಳಲ್ಲಿ ಆಶ್ಲೆ ಎರಡನೆಯವಳು. ಆರೂರಿನ ಎಸ್​ಬಿಐಗೆ ಬಹುಮಾನ ಬಂದ ಲಾಟರಿ ಟಿಕೆಟ್​ ಸಲ್ಲಿಸಿ, ಹಣವನ್ನು ಪಡೆದಿದ್ದಾರೆ. (ಏಜೆನ್ಸೀಸ್​)