Stray Dog Bite: ನಾಲ್ಕು ತಿಂಗಳ ಹಿಂದೆಯಷ್ಟೇ ಬೀದಿ ನಾಯಿ ಕಡಿತಕ್ಕೆ ತುತ್ತಾದ 4 ವರ್ಷದ ಬಾಲಕಿಯೊಬ್ಬಳು ಇಂದು (ಆ.19) ರೇಬಿಸ್ಗೆ ಬಲಿಯಾದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಮೊಟೇಬೆನ್ನೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು; 6 ಜನರಿಗೆ ಗಂಭೀರ ಗಾಯ
ನಾಯಿ ಕಡಿತದಿಂದ ರೇಬಿಸ್ ಕಾಯಿಲೆಗೆ ತುತ್ತಾಗಿದ್ದ ಬಾಲಕಿಯನ್ನು ಖದೀರಾ ಬಾನು ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ದಾವಣಗೆರೆ ಮೂಲದ ಬಾಲಕಿಯನ್ನು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವಿಗೀಡಾಗಿದೆ ಎಂದು ವರದಿಯಾಗಿದೆ.
ಏಪ್ರಿಲ್‌ನಲ್ಲಿ ತನ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ಬೀದಿ ನಾಯಿಯೊಂದು ಕಚ್ಚಿ ಗಾಯಗೊಳಿಸಿತ್ತು. ನಾಯಿ ಆಕೆಯ ಮುಖ ಮತ್ತು ದೇಹದ ಇತರ ಭಾಗಗಳನ್ನು ಕಚ್ಚಿದ್ದರಿಂದ ಮಗು ತೀವ್ರವಾಗಿ ಗಾಯಗೊಂಡಿತ್ತು. ತಕ್ಷಣವೇ ಆಕೆಯ ಕುಟುಂಬಸ್ಥರು, ಬಾಲಕಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ವರ್ಗಾಯಿಸಿದ್ದರು. ಮಗುವನ್ನು ಉಳಿಸಿಕೊಳ್ಳಲು ತಂದೆ-ತಾಯಿ ನಡೆಸಿದ ಹೋರಾಟ ಕಡೆಗೂ ವಿಫಲವಾಗಿದೆ.
ಈ ತಿಂಗಳ ಆರಂಭದಲ್ಲಿ, ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ನಗರದಲ್ಲಿ ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಯನ್ನು ನಿಭಾಯಿಸುವಲ್ಲಿ ಬಿಬಿಎಂಪಿ ವಿಫಲವಾದ ಹಿನ್ನೆಲೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಇನ್ನು, ದೆಹಲಿಯ ಬೀದಿಗಳಲ್ಲಿ ನಾಯಿಗಳನ್ನು ನೋಡಬಾರದು. 8 ವಾರಗಳ ಒಳಗೆ ಎಲ್ಲ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ದೆಹಲಿ ಸರ್ಕಾರಕ್ಕೆ ಆಗಸ್ಟ್ 11ರಂದು ಸುಪ್ರೀಂ ಕೋರ್ಟ್ ಒಂದು ಆದೇಶ ನೀಡಿತು. ಅಲ್ಲದೆ, ಇದಕ್ಕೆ ಅಡ್ಡಿಪಡಿಸುವವರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಿತು.
ಇದನ್ನೂ ಓದಿ: ಟ್ರಂಪ್-ಝೆಲೆನ್ಸ್ಕಿ ಸಭೆಯಲ್ಲಿ ಏನೆಲ್ಲ ಚರ್ಚೆ? ಇಬ್ಬರ ಭೇಟಿಯಲ್ಲಿ ಹೊರಬಂದ ಪ್ರಮುಖ ಹೇಳಿಕೆಗಳಿವು | Trump-Zelensky Meet
ಇಷ್ಟಾದರೂ ಪ್ರಾಣಿ ಪ್ರಿಯರು ಈ ಒಂದು ತೀರ್ಪನ್ನು ಬಲವಾಗಿ ವಿರೋಧಿಸುತ್ತಿದ್ದಾರೆ. ಮೂಕ ಜೀವಿಗಳಿಗೆ ಕರುಣೆ ತೋರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಒಂದು ವರ್ಗ ಸುಪ್ರೀಂ ಆದೇಶವನ್ನು ಬೆಂಬಲಿಸಿದರೆ, ಪ್ರಾಣಿ ಪ್ರಿಯರ ವರ್ಗ ಇದನ್ನು ಸುತಾರಾಮ್ ಒಪ್ಪುತ್ತಿಲ್ಲ. ಬದಲಿಗೆ ವಿರೋಧಿಸುತ್ತ ಬರುತ್ತಿದ್ದಾರೆ. ಇದಕ್ಕೆ ಸಿನಿಮಾ ಕಲಾವಿದರು ಕೂಡ ಸೇರಿಕೊಂಡಿದ್ದಾರೆ. ನಟಿ ಸದಾ, ಜಾನ್ವಿ ಕಪೂರ್, ಸೋನಾಕ್ಷಿ ಸಿನ್ಹಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ತೀರ್ಪನ್ನು ರದ್ದುಗೊಳಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಆಗ್ರಹಿಸುತ್ತಿದ್ದಾರೆ,(ಏಜೆನ್ಸೀಸ್).