ಅಹಮದಾಬಾದ್: ಬ್ರೈನ್ ಟ್ಯೂಮರ್ನಿಂದ ಬಳಲುತ್ತಿರುವ 11 ವರ್ಷದ ಬಾಲಕಿಯ ಐಎಎಸ್ ಅಧಿಕಾರಿಯಾಗುವ ಆಸೆಯನ್ನು ಗುಜರಾತಿನ ಅಹಮದಾಬಾದ್ನ ಜಿಲ್ಲಾಧಿಕಾರಿ ಸಂದೀಪ್ ಸಗಳೆ ಈಡೇರಿಸಿದ್ದಾರೆ. ಗಾಂಧಿನಗರದ ನಿವಾಸಿ ಫ್ಲೋರಾ ಅಸೋಡಿಯ, ಒಂದು ದಿನದ ಮಟ್ಟಿಗೆ ಅಹಮದಾಬಾದ್ನ ಕಲೆಕ್ಟರ್ ಆಗಿ ಉನ್ನತ ಹುದ್ದೆಯ ಕುರ್ಚಿಯ ಮೇಲೆ ಕೂತು ಸಂತೋಷ ಪಟ್ಟಿದ್ದಾಳೆ.
ಗಾಂಧಿನಗರದ ನಿವಾಸಿಯಾದ ಫ್ಲೋರಾ, ಓದಿನಲ್ಲಿ ಮುಂದಿದ್ದು, ಬೆಳೆದು ಐಎಎಸ್ ಅಧಿಕಾರಿ ಅಥವಾ ಕಲೆಕ್ಟರ್ ಆಗುವ ಹೆಬ್ಬಯಕೆ ಹೊಂದಿದ್ದಾಳೆ. ಈಗ್ಗೆ 7 ತಿಂಗಳ ಹಿಂದೆ ಆಕೆಗೆ ಬ್ರೈನ್ ಟ್ಯೂಮರ್ ಇರುವುದು ಪತ್ತೆಯಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಅವಳ ಶುಶ್ರೂಷೆ ನಡೆಸುತ್ತಿದ್ದಾರೆ. ಈ ನಡುವೆ ಮೇಕ್ ಎ ವಿಶ್ ಫೌಂಡೇಶನ್ನವರು ಮಾಡಿದ ಮನವಿಯ ಮೇರೆಗೆ ಆಕೆಗೆ ಶನಿವಾರ(ಸೆ.18)ದಂದು ಕಲೆಕ್ಟರ್ ಆಗುವ ಅವಕಾಶ ನೀಡಲಾಯಿತು ಎನ್ನಲಾಗಿದೆ.
ಸೆಪ್ಟೆಂಬರ್ 25 ಕ್ಕೆ ಫ್ಲೋರಾಳ ಹುಟ್ಟಿದಹಬ್ಬ ಬರುತ್ತಿದ್ದು, ಈ ಸಂದರ್ಭಕ್ಕೆ ಅವಳ ಬಯಕೆಯನ್ನು ಈಡೇರಿಸಲಾಯಿತು. ಜೊತೆಗೆ, ಜಿಲ್ಲಾಧಿಕಾರಿಗಳು ಮತ್ತು ಕಛೇರಿಯ ಸಿಬ್ಬಂದಿ ಅವಳಿಗೆ ಹಲವು ಉಡುಗೊರೆಗಳನ್ನು ನೀಡಿ, ಮುಂಚಿತವಾಗಿಯೇ ಬರ್ತ್ಡೇ ಆಚರಣೆ ಮಾಡಿದರು ಎನ್ನಲಾಗಿದೆ. (ಏಜೆನ್ಸೀಸ್)