ನ್ಯೂಸ್

ಬಾಲಕಿಯ ಅಪಹರಣ ಪ್ರಕರಣ: ಟ್ಯೂಷನ್ ಶಿಕ್ಷಕನ ಬಂಧನ

ಬೆಂಗಳೂರು: ಹದಿನೈದು ವರ್ಷದ ಬಾಲಕಿಯನ್ನು ಅಪಹರಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ಯೂಷನ್ ಶಿಕ್ಷಕನನ್ನು ಜೆ.ಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಜೆ.ಪಿ. ನಗರದ ನಿವಾಸಿ ಅಭಿಷೇಕ್ ಗೌಡ (೩೦) ಬಂಧಿತ ಆರೋಪಿ.

ಅಭಿಷೇಕ್‌ನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕನಕಪುರದ ಹಾರೋಹಳ್ಳಿ ಮೂಲದ ಅಭಿಷೇಕ್ ಗೌಡ , ಜೆ.ಪಿ. ನಗರ ೧ನೇ ಹಂತದ ಆಂಜನೇಯ ದೇವಸ್ಥಾನದ ಬಳಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಈತ ವಿವಾಹಿತನಾಗಿದ್ದು, ಜಿಮ್ ಟ್ರೇನರ್ ಆಗಿದ್ದ. ೧ ರಿಂದ ೧೦ ತರಗತಿ ವಿದ್ಯಾರ್ಥಿಗಳಿಗೆ ಟ್ಯೂಷನ್ ಮಾಡುತ್ತಿದ್ದ. ಬಾಲಕಿ ಕಳೆದ ನಾಲ್ಕು ವರ್ಷಗಳಿಂದ ಅಭಿಷೇಕ್‌ನ ಟ್ಯೂಷನ್‌ಗೆ ಹೋಗುತ್ತಿದ್ದಳು. ಇದೇ ರೀತಿ ನ. ೨೩ರಂದು ಮಧ್ಯಾಹ್ನ ೩.೩೦ಕ್ಕೆ ಬಾಲಕಿಯನ್ನು ಸಹೋದರ ಟ್ಯೂಷನ್‌ಗೆ ಬಿಟ್ಟು ಬಂದಿದ್ದ. ರಾತ್ರಿ ೭ ಗಂಟೆಯಾದರೂ ಆಕೆ ಮನೆಗೆ ವಾಪಾಸ್ ಬಾರದಿದ್ದಾಗ ಆತಂಕಗೊಂಡಿದ್ದ ಪಾಲಕರು ಟ್ಯೂಷನ್ ಬಳಿ ತೆರಳಿ ವಿಚಾರಿಸಿದ್ದರು. ಆ ವೇಳೆ ಶಿಕ್ಷಕ ಮನೆ ಬೀಗ ಹಾಕಿರುವುದು ಕಂಡುಬಂದಿತ್ತು.

ಶಿಕ್ಷಕ ಮಾತನಾಡಿರುವುದು ವಿಡಿಯೋ ಸಿಕ್ಕಿತ್ತು:

ಆ ಕಟ್ಟಡದ ಮನೆಯೊಂದರಲ್ಲಿದ್ದ ಪರಿಚಿತ ಯುವತಿಯನ್ನು ವಿಚಾರಿಸಿದಾಗ, ಅಭಿಷೇಕ್ ಗೌಡ ‘ನಾನು ಬರುವುದು ತಡವಾದರೆ, ಮನೆಗೆ ಬೀಗ ಹಾಕಿ ಕೀಯನ್ನು ನೀವೇ ಇರಿಸಿಕೊಳ್ಳಿ’ ಎಂದು ಹೇಳಿದ್ದರು. ಹೀಗಾಗಿ ಅವರ ಮನೆಗೆ ಬೀಗ ಹಾಕಿದ್ದೇನೆ ಎಂದು ತಿಳಿಸಿದ್ದಳು.ಆ ಯುವತಿಯ ಸಹಾಯ ಪಡೆದು ಬಾಲಕಿಯ ಪಾಲಕರು ಶಿಕ್ಷಕನ ಮನೆಯೊಳಗೆ ಪ್ರವೇಶಿಸಿದಾಗ, ಮನೆಯ ಟೇಬಲ್ ಮೇಲೆ ಮೊಬೈಲ್ ಕಂಡುಬಂದಿತ್ತು. ಆ ಮೊಬೈಲ್ ತೆರೆದು ನೋಡಿದಾಗ ಶಿಕ್ಷಕ ಮತ್ತು ಬಾಲಕಿ ಮದುವೆಯಾಗಿದ್ದಾರೆ ಎನ್ನಲಾದ ಫೋಟೋ ಮತ್ತು ವಿಡಿಯೋ ಪತ್ತೆಯಾಗಿತ್ತು. ವರ್ಷದಿಂದ ನಾವಿಬ್ಬರೂ ಪ್ರೀತಿಸುತ್ತಿರುವುದಾಗಿ ಶಿಕ್ಷಕ ಮಾತನಾಡಿರುವುದು ವಿಡಿಯೋದಲ್ಲಿತ್ತು. ಹೀಗಾಗಿ ಬಾಲಕಿ ಪಾಲಕರು ಜೆ.ಪಿ.ನಗರ ಪೊಲೀಸ್ ಠಾಣೆಗೆ ತೆರಳಿ ಶಿಕ್ಷಕನ ದೂರು ನೀಡಿದ್ದರು.