ನ್ಯೂ ಯಾರ್ಕ್: ಮೆಟ್ರೋ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಏಷಿಯನ್ ಕುಟುಂಬವೊಂದರ ಮೇಲೆ ಮೂವರು ಹುಡುಗಿಯರು ಏಕಾಏಕಿ ದಾಳಿ ಮಾಡಿದ್ದಾರೆ. ಗಂಡ ಹೆಂಡತಿ ಮತ್ತು ಅವರ 11 ವರ್ಷದ ಅವಳಿ ಹೆಣ್ಣುಮಕ್ಕಳ ಮೇಲೆ ಹದಿ ಹರೆಯದ ಹುಡುಗಿಯರು ಕೂಗಾಡಿ ಹಲ್ಲೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಹಜಾಲತಾಣದಲ್ಲಿ ವೈರಲ್ ಆಗ ತೊಡಗಿದೆ. ವೈರಲ್ ಆಗುತ್ತಿರುವ ವಿಡಿಯೋಗೆ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದು, ನ್ಯೂಯಾರ್ಕ್ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಗ್ರೀನ್ವಿಚ್ ವಿಲೇಜ್ನಲ್ಲಿ ಎಫ್ ರೈಲಿನಲ್ಲಿ ಈ ಘಟನೆ ಸಂಭವಿಸಿದೆ.
ಮೂವರು ಯುವತಿಯರಲ್ಲಿ ಒಬ್ಬಾಕೆ ಆ ಕುಟುಂಬದ 51 ವರ್ಷದ ಏಷಿಯನ್ ಮಹಿಳೆ ಸ್ಯೂ ಯಂಗ್ ಮೇಲೆ ಹಲ್ಲೆ ಮಾಡಿ, ಆಕೆಯ ಕೂದಲನ್ನು ಹಿಡಿದೆಳೆದು ಆಕೆಗೆ ಒಂದೇ ಸಮ ಗುದ್ದಿದ್ದಾಳೆ.
‘ಈ ರೀಲ್ ಮಾಡಿದ ನಾನು ನಿಜಕ್ಕೂ ಆಘಾತಗೊಂಡಿದ್ದೇನೆ. ಈ ರೀಲ್ನ ಹೊರತಾಗಿಯೂ ಬರೆಯಲು ವಿಷಯಗಳಿದ್ದರೂ ನನಗೆ ಪದಗಳೇ ಎಟುಕುತ್ತಿಲ್ಲ. ಸ್ವಲ್ಪ ತಲೆ ಮತ್ತು ಬೆನ್ನು ನೋವಿದೆ, ಚೇತರಿಸಿಕೊಳ್ಳುತ್ತೇನೆ’ ಎಂದಿದ್ದಾರೆ ಈ ವಿಡಿಯೋ ಪೋಸ್ಟ್ ಮಾಡಿದ ಜೊನ್ನಾ ಲಿನ್
ಮೂವರೂ ಹುಡುಗಿಯರು ಎದುರಿಗೆ ಕುಳಿತಿದ್ದ ನಮ್ಮನ್ನು ನೋಡಿ ನಗಲು ಪ್ರಾರಂಭಿಸಿದರು. ನಂತರ ನಿಂದಿಸತೊಡಗಿದರು. ಅವಮಾನದ ಮೇಲೆ ಅವಮಾನ ಸಹಿಸಿದೆವು. ಆಗ ನನ್ನ ಗಂಡ, ನೀವು ಇದಕ್ಕಿಂತ ಒಳ್ಳೆಯ ಶಬ್ದಗಳನ್ನು ಹೇಳಬಹುದೇ? ಎಂದು ಕೇಳಿದರು. ಆಗ ಕೆರಳಿದ ಯುವತಿಯರು ನಮ್ಮ ಮೇಲೆ ಹಲ್ಲೆ ನಡೆಸಿದರು’ ಎಂದು ಹಲ್ಲೆಗೊಳಗಾದ ಸ್ಯೂ ಯಂಗ್ ಮಾಹಿತಿ ನೀಡಿದ್ದಾರೆ.
ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಜೊನ್ನಾ ಲಿನ್ ಮೊಬೈಲ್ನಲ್ಲಿ ರೆಕಾರ್ಡ್ ಮಾಡುತ್ತಿದ್ದಾರೆಂಬ ವಿಚಾರ ಮೂವರಿಗೂ ಗೊತ್ತಾಗಿ ಆಕೆಯನ್ನು ತಳ್ಳಿದರು. ಅಷ್ಟೇ ಅಲ್ಲ ಕೂದಲನ್ನು ಹಿಡಿದು ನೆಲಕ್ಕೆ ಬೀಳಿಸಿ ಬೆನ್ನಿನ ಮೇಲೆ ಸಾಕಷ್ಟು ಸಲ ಗುದ್ದಿದರು. ಈ ಸಂದರ್ಭದಲ್ಲಿ ಇತರೇ ಪ್ರಯಾಣಿಕರು ರಕ್ಷಣೆಗೆ ಧಾವಿಸಿದರೂ ಆ ಮೂವರು ಹುಡುಗಿಯರನ್ನು ತಡೆಯುವುದು ಅಸಾಧ್ಯವಾಗಿತ್ತು. ನಂತರ ಮುಂದಿನ ನಿಲ್ದಾಣದಲ್ಲಿ ಆ ಕುಟುಂಬವು ಇಳಿದು ಪೊಲೀಸರಿಗೆ ಈ ವಿಷಯ ತಿಳಿಸಿದ್ದು, ಪೊಲೀಸರು ಮೂವರು ಹುಡುಗಿಯರ ಹುಡುಕಾಟದಲ್ಲಿದ್ದಾರೆ.