ವಿದೂರಥನು ಹಿಂದಿನ ಜನ್ಮದಲ್ಲಿ ಪದ್ಮಮಹಾರಾಜ. ಹಿಂದಿನ ಜನ್ಮದ ಆತನ ಪತ್ನಿ ಲೀಲಾಮಹಾರಾಣಿ. ಲೀಲಾಮಹಾ ರಾಣಿಯು ಮೃತನಾದ ತನ್ನ ಪತಿ ಪದ್ಮಮಹಾರಾಜನನ್ನು ಮತ್ತೆ ಪಡೆಯಬೇಕೆಂದು ಶ್ರೀದೇವಿಯನ್ನು ಪ್ರಾರ್ಥಿಸಿಕೊಂಡಾಗ ಶ್ರೀದೇವಿಯು ಅವಳಿಗೆ ಸೃಷ್ಟಿಯ ಅದ್ಭುತ ರಹಸ್ಯಗಳನ್ನು ತೋರಿಸುವ ಮೂಲಕ ಉತ್ತರ ಕೊಡುತ್ತಿದ್ದಾಳೆ. ಲೀಲಾಮಹಾರಾಣಿಯು ಈಗ ಶ್ರೀದೇವಿಯ ಜೊತೆಯಲ್ಲಿ ಸೂಕ್ಷ್ಮರೂಪದಿಂದ ಇದ್ದುಕೊಂಡು ಯುದ್ಧದೃಶ್ಯವನ್ನು ನೋಡುತ್ತಿದ್ದಾಳೆ.
ಶ್ರೀವಸಿಷ್ಠರು ಮುಂದುವರಿಸಿದರು-‘ಶ್ರೀರಾಮ! ಕಂದಾ ಕಸ್ಥಳವೆಂಬ ದೇಶ(ರಾಜ್ಯ)ದ ಸೈನಿಕರು ವನರಾಜ್ಯದ ಸೈನಿಕರೊಡನೆ ಯುದ್ಧ ಮಾಡುತ್ತಿದ್ದರು. ಕಂದಾಕಸ್ಥಳದ ಸೈನಿಕರು ಸೋತು ಹೋದರು. ಅವರ ಹೀನಾಯ ಸೋಲನ್ನು ನೋಡಿದರೆ ಹೇಗೆ ಕಾಣುತ್ತಿತ್ತೆಂದರೆ ವನರಾಜ್ಯವೆಂಬ ಮುಪ್ಪು ಈ ಕಂದಕಸ್ಥಳದ ಜಂತುಗಳನ್ನು ಆವರಿಸಿಕೊಂಡಿದೆಯೋ! ಅನ್ನುವಷ್ಟು. ಅಥವಾ ದುರ್ಬಲವಾಗಿರುವ ತಂತು(ಹಗ್ಗ)ಗಳನ್ನು ತುಂಬಾ ಎಳೆದರೆ ಸುಲಭವಾಗಿ ಹರಿದುಹೋಗುವಂತೆ ನಾಶವಾದರು’.
‘ಇನ್ನೊಂದೆಡೆ ಯುದ್ಧರಂಗದ ಕೆಸರಿನಲ್ಲಿ ರಥಗಳ ಚಕ್ರಗಳು ಆಳವಾದ ತಗ್ಗಿನಲ್ಲಿ ಹೂತು ಹೋದವು. ಅಂಥ ರಥಗಳ ಮೇಲೂ ಒಂದಷ್ಟು ಸೈನಿಕರು ಆಕ್ರಮಣ ಮಾಡುತ್ತ ಮುಗಿಬಿದ್ದರು. ಕಾಡಿನ ಬೆಟ್ಟಗಳಲ್ಲಿ ಮೇಘಗಳು (ಆಲಿಕಲ್ಲಿನ ರೂಪದಲ್ಲಿ) ಬೀಳುವಂತೆ ರಥಗಳ ಮೇಲೆ ಸೈನಿಕರು ಬಿದ್ದರು.
ಶಾಲವನದ ಮತ್ತು ತಾಲವನದ ಸೈನಿಕರು ಯುದ್ಧದಲ್ಲಿ ಪರಸ್ಪರ ಮುಖಾ ಮುಖಿಯಾದರು. ಶಾಲವನ(ಶಾಲವೆಂಬ ವೃಕ್ಷಗಳ ವನ) ತಾಲವನ(ತಾಲವೆಂಬ ವೃಕ್ಷಗಳ ವನ)ಗಳು ಯುದ್ಧವೆಂಬ ಮಹಾವನದಲ್ಲಿ ಸೇರಿದವು. ಆ ಯುದ್ಧ ಎಷ್ಟೊಂದು ಭೀಕರ! ಅನೇಕರ ಭುಜಗಳನ್ನು ಕಡಿ ದರು. ಅನೇಕರ ತಲೆಗಳನ್ನು ಕಡಿದರು. (ಭುಜವೆಂಬ ಶಬ್ದಕ್ಕೆ ಮರಗಳ ಶಾಖೆಗಳು ಎಂಬುದಾಗಿಯೂ ಒಂದು ಅರ್ಥವಿದೆ.) ಭುಜಗಳನ್ನು ಕಡಿದಿದ್ದರಿಂದ ಶಾಲವನ ತಾಲವನದಂತಾಯಿತು. (ತಾಲವೃಕ್ಷಗಳು ಎತ್ತರಕ್ಕೆ ಬೆಳೆದಿದ್ದು ಶಾಖೆಗಳಿಲ್ಲದಿರುವಂತೆ ಶಾಲವನದ ಸೈನಿಕರ ಭುಜಗಳನ್ನು ಕಡಿದಿದ್ದರಿಂದ ತಾಲವೃಕ್ಷದಂತಾದರು.)
ತಾಲವನ ಸ್ಥಾಣುವನ (ಮೋಟು ಮರಗಳಿರುವ ವನ)ದಂತಾಯಿತು. (ತಾಲವೃಕ್ಷದ ತಲೆಯ ಭಾಗವನ್ನು ಕಡಿದಾಗ ಮೋಟುಮರ ಮಾತ್ರ ಉಳಿಯುವಂತೆ ತಾಲವನದ ಸೈನಿಕರು ತಲೆಗಳನ್ನು ಕಡಿದಿದ್ದರಿಂದ ಮೋಟು ಮರಗಳಂತಾದರು)’. ‘ಅತ್ತ ದೇವಲೋಕದ ನಂದನೋದ್ಯಾನದಲ್ಲಿ ದೇವತಾ ಸುಂದರಿಯರು ಯೌವ್ವನದ ಮದವೇರಿ ಕುಣಿದಾಡುತ್ತಿದ್ದರು. ಮೇರು ಪರ್ವತದ ವನ-ಉಪವನ ಪ್ರದೇಶಗಳಲ್ಲಿ ವೀರಸ್ವರ್ಗ ಪಡೆದ ಆ ಸೈನಿಕರ ಜೊತೆ ನರ್ತನ ಮಾಡುತ್ತಿದ್ದರು.’ ‘ಸೈನ್ಯವೆಂಬ ಕಾನನವು ಸೈನಿಕರೆಂಬ ಪಕ್ಷಿಗಳ ಉಚ್ಚಸ್ವರದಿಂದ ಶೋಭಿಸುತ್ತಿತ್ತು. ಎಲ್ಲಿಯವರೆಗೆ? ಶತ್ರು ಸೈನಿಕರೆಂಬ ಕಲ್ಪಾಂತ್ಯದ ಅಗ್ನಿಗೆ ಸದೃಶವಾದ ದಾವಾನಲವು ಬಂದೆರಗಿಲ್ಲವೋ ಅಲ್ಲಿಯ
ತನಕ. ಶತ್ರುಸೈನ್ಯವೆಂಬ ದಾವಾನಲವು ಎರಗಿದ ಕೂಡಲೇ ಸೈನಿಕರ ಉಚ್ಚಸ್ವರ ಬದಲಾಗುತ್ತಿತ್ತು. ವಿಶಾಲವಾದ ಯುದ್ಧರಂಗದಲ್ಲಿ ಎಲ್ಲಿಯಾದರೂ ಈ ರೀತಿ ಸೈನಿಕರ ಉಚ್ಚಸ್ವರ ಬದಲಾಯಿತೆಂದರೆ ಅಲ್ಲಿ ಶತ್ರು ಸೈನಿಕರ ತೀವ್ರ ಆಕ್ರಮಣವಾಗುತ್ತಿದೆ ಎಂದು ಅರ್ಥಮಾಡಿಕೊಳ್ಳಬಹುದು’. ‘ಕಾಮರೂಪ ಎಂಬ ದೇಶದ ಸೈನಿಕರು ಭೂತ-ಪಿಶಾಚಗಳ ಸಹಯೋಗದೊಂದಿಗೆ ಯುದ್ಧ ಮಾಡುವ ವಿಚಿತ್ರ ಪ್ರವೃತ್ತಿಯುಳ್ಳವರು. ಅವರೊಡನೆ ಯುದ್ಧಕ್ಕಿಳಿದ ದಶಾರ್ಣದೇಶದ ಸೈನಿಕರ ಕೈಗಳಲ್ಲಿರುವ ವಿವಿಧ ಆಯುಧಗಳನ್ನು ಭೂತಗಳು ಅಪಹರಿಸಿದವು.
ಹಾಗಾಗಿ ಭಯಭೀತರಾದ ದಶಾರ್ಣರು ಓಡತೊಡಗಿದರು. ಅವರು ಓಡುವ ರಭಸಕ್ಕೆ ಕರ್ಣ ಎಂಬ ಜನಪದದ ಸೈನಿಕರು ಅವರ ಕಾಲ್ತುಳಿತಕ್ಕೆ ಒಳಗಾದರು. ಕರ್ಣ ಸೈನಿಕರನ್ನು ಮೆಟ್ಟಿಕೊಂಡೇ ದಶಾರ್ಣರು ಓಡಿ ಹೋದರು. ಬೆದರಿಸಲ್ಪಟ್ಟ ಚಿಕ್ಕಹೋರಿಕರುಗಳು ಓಡಿ ಹೋಗುವಾಗ ಸಣ್ಣಪುಟ್ಟ ಗಿಡಗಂಟಿಗಳನ್ನು ತುಳಿದುಕೊಂಡೇ ಓಡಿಹೋಗುವಂತೆ ಆ ದೃಶ್ಯ ಕಂಡು ಬರುತ್ತಿತ್ತು’.‘ಕಾಶಿ ದೇಶದ ಸೈನಿಕರು ಜಿಗೀಷವನ ದೇಶದ ಸೈನಿಕರೊಂದಿಗೆ ಯುದ್ಧಮಾಡುತ್ತಿದ್ದಾಗ ಕಾಶಿದೇಶದ ಸೇನಾನಾಯಕನು ಹತನಾದನು. ಇದರಿಂದ ಕಾಶಿ ದೇಶದವರ ಕಾಂತಿಯೆಲ್ಲವೂ ಕಳೆದುಹೋಯಿತು.
ಬೇಸಿಗೆಯ ಹೊಡೆತಕ್ಕೆ ನೀರಿನ ಝುರಿಯು ಭತ್ತಿ ಹೋಗಿ ಸರೋವರ ಒಣಗಿ ಹೋಗಿದ್ದರಿಂದ ಅಲ್ಲಿರುವ ಕಮಲಗಳು ಕಾಂತಿಯನ್ನು ಕಳೆದುಕೊಳ್ಳುವಂತೆ ಕಾಶಿದೇಶದ ಸೈನಿಕರ ಕಾಂತಿ ಅಡಗಿ ಹೋಯಿತು’. ‘ತುಷಾಕದೇಶದ ಸೈನಿಕರನ್ನು ಮೇಖಲದೇಶದ ಸೈನಿಕರು ಬಾಣ, ಶಕ್ತಿ, ಖಡ್ಗ ಮತ್ತು ಮುದ್ಗರಗಳಿಂದ ಆಕ್ರಮಿಸಿ ಸೋಲಿಸಿದರು. ನರಕ ಎಂಬ ದೇಶದ ಸೈನಿಕರಿಂದ ಕಟಕಚ್ಛಲನ ದೇಶದ ಜನರು ಸೋಲಿಸಲ್ಪಟ್ಟು ಓಡಿಹೋದರು. ಕೌಂತಕ್ಷೇತ್ರದ ಸೈನಿಕರನ್ನು ಪ್ರಸ್ಥವಾಸಿಗಳಾದ ಸೈನಿಕರು ಆವರಿಸಿದರು. ಪ್ರಸ್ಥವಾಸಿಗಳೆಂದರೆ ಎತ್ತರದ ಸ್ಥಳಗಳಲ್ಲಿ ವಾಸಿಸುವವರು. ಅವರ ವೈಶಿಷ್ಟ್ಯವೇನೆಂದರೆ ನಿಂತಲ್ಲಿಯೇ ಇದ್ದು ಯುದ್ಧಮಾಡುವುದರಲ್ಲಿ ನಿಷ್ಣಾತರು. ಯುದ್ಧರಂಗದಲ್ಲಿ ಅತ್ತಿತ್ತ ಓಡಾಟವಿಲ್ಲದೇ ಯುದ್ಧಮಾಡುತ್ತಿದ್ದರು. ದುಷ್ಟರ ಕೈಗೆ ಸಿಕ್ಕದ ಗುಣವಂತರಂತೆ ಸುಲಭವಾಗಿ ಕೌಂತಕ್ಷೇತ್ರದ ಸೈನಿಕರು ಅಶಕ್ತರಾದರು, ಸೋತರು’. (ಪ್ರತಿಕ್ರಿಯಿಸಿ: vvsudina@gmail.com, info.swarnavalli@gmail.com)