ಅರಸೀಕೆರೆ (ಗ್ರಾಮಾಂತರ): ಗ್ರಾಮೀಣ ಭಾಗದ ವಲಯ ತೋಟ, ಗದ್ದೆ ಹೊಲಗಳಲ್ಲಿ ಮನೆ ನಿರ್ಮಿಸಿಕೊಂಡಿರುವ ನಮಗೆ ಕುಡಿಯುವ ನೀರು ರಸ್ತೆ ಹಾಗೂ ವಿದ್ಯುತ್ ಸಮಸ್ಯೆಗಳು ಕಾಡುತ್ತಿದ್ದು ಇವುಗಳಿಂದ ಮುಕ್ತಿ ದೊರಕಿಸಿ ಕೊಡುವಂತೆ ಗ್ರಾಮಸ್ಥರು ರಾಜ್ಯ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಎದುರು ಅಳಲು ತೋಡಿಕೊಂಡರು.
ತಾಲೂಕು ಆಡಳಿತ ಹಾಗೂ ಕಣಕಟ್ಟೆ ಗ್ರಾಮ ಪಂಚಾಯಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಜನಸಂಪರ್ಕ ಸಭೆಯಲ್ಲಿ ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ತಾವು ಎದುರಿಸುತ್ತಿದ್ದ ಹಲವು ಸಮಸ್ಯೆಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮುಂದೆ ಸೋಮವಾರ ಅನಾವರಣ ಮಾಡಿದರು.
ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ ಶಾಸಕ ಶಿವಲಿಂಗೇಗೌಡ ಸ್ಥಳದಲ್ಲೇ ಇದ್ದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಹಲವು ಅರ್ಜಿಗಳನ್ನು ಸ್ಥಳದಲ್ಲಿ ಇತ್ಯರ್ಥಪಡಿಸಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ನಮಗೆ ಸ್ವಂತ ಮನೆ ಇಲ್ಲ. ಸೂರು ನಿರ್ಮಿಸಿಕೊಳ್ಳಲು ನಿವೇಶನ ಕೋರಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕರ ಮನವಿಯಾಗಿತ್ತು. ಈ ಕುರಿತು ತೀವ್ರ ಅಸಮಾಧಾನಗೊಂಡ ಶಾಸಕರು ಪಿಡಿಒಗಳ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಮುಂದಿನ ಒಂದು ತಿಂಗಳ ಒಳಗೆ ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗಗಳನ್ನು ಗುರುತಿಸಿ ನಿವೇಶನರಹಿತರಿಗೆ ವಿತರಿಸುವ ನಿಟ್ಟಿನಲ್ಲಿ ಪಿಡಿಒಗಳು ಕ್ರಮ ಕೈಗೊಳ್ಳದೇ ಹೋದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ತಹಸೀಲ್ದಾರ್ ಸಂತೋಷ್‌ಕುಮಾರ್ ಮಾತನಾಡಿ, ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡಿಕೊಡುವ ಸಲುವಾಗಿಯೇ ಆರಂಭಗೊಂಡ ಜನಸಂಪರ್ಕ ಸಭೆ ತಾಲೂಕಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುತ್ತಿರುವುದು ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜನಸಂಪರ್ಕ ಸಭೆಯಲ್ಲಿ ಗಣಕಟ್ಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಮ್ಮ ಗೊಲ್ಲರಹಳ್ಳಿ ಹನುಮಪ್ಪ, ಗೀಜಿಹಳ್ಳಿ ಧರ್ಮಶೇಖರ್, ಸತೀಶ್, ಯೋಗೀಶ್ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.