ತಿ.ನರಸೀಪುರದ ಜೆಎಸ್‌ಎಸ್ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನವನ್ನು ಐಸಿಎಆರ್ ಕೃಷಿ ಅಳವಡಿಕೆ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಎಂ.ಚಂದ್ರೇಗೌಡ ಉದ್ಘಾಟಿಸಿದರು. ಮಂಜುನಾಥ ಅಂಗಡಿ, ಡಾ.ಕೆ.ಎಚ್.ರವಿ, ಬಿ.ಎಂ.ಶಿವಮಲ್ಲಪ್ಪ, ಕುರುಬೂರು ಸಿದ್ದೇಶ್ ಇತರರು ಇದ್ದರು. 
ನ್ಯೂಸ್

ಮುಂಗಾರು ಕೃಷಿ ಹಂಗಾಮಿಗೆ ಸನ್ನದ್ಧರಾಗಿ

ತಿ.ನರಸೀಪುರ: ರೈತರು ಕೃಷಿ ಸಂಕಲ್ಪ ಅಭಿಯಾನದಲ್ಲಿ ವೈಜ್ಞಾನಿಕ ವಿಚಾರಗಳು ಮತ್ತು ಪದ್ಧತಿಗಳ ಆಯಾಮಗಳನ್ನು ಅರ್ಥೈಸಿಕೊಂಡು ಮುಂಗಾರು ಕೃಷಿ ಹಂಗಾಮಿಗೆ ಸನ್ನದ್ಧರಾಗಬೇಕು ಎಂದು ಬೆಂಗಳೂರು ಐಸಿಎಆರ್ ಕೃಷಿ ಅಳವಡಿಕೆ ಸಂಶೋಧನಾ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ.ಎಂ.ಚಂದ್ರೇಗೌಡ ಹೇಳಿದರು.

ಪಟ್ಟಣದ ಜೆಎಸ್‌ಎಸ್ ಸಭಾ ಭವನದಲ್ಲಿ ಬುಧವಾರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಸುತ್ತೂರಿನ ಐಸಿಎಆರ್ ಜೆಎಸ್ ಎಸ್ ಕೃಷಿ ವಿಜ್ಞಾನ ಕೇಂದ್ರ, ಕೃಷಿ, ತೋಟಗಾರಿಕೆ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆಗಳು ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಕಸಿತ ಕೃಷಿ ಸಂಕಲ್ಪ ಅಭಿಯಾನವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕೆ.ಎಚ್.ರವಿ ಮಾತನಾಡಿ, ರೈತರು ಮಣ್ಣು ಹಾಗೂ ನೀರಿನ ಪರೀಕ್ಷೆ ಮಾಡಿಸುವುದರಿಂದ ತಮ್ಮ ಜಮೀನಿನಲ್ಲಿ ಪೋಷಕಾಂಶಗಳು ಎಷ್ಟು ಪ್ರಮಾಣದಲ್ಲಿದೆ ಹಾಗೂ ಅದು ಬೆಳೆಗಳಿಗೆ ಯಾವ ಪ್ರಮಾಣದಲ್ಲಿ ದೊರೆಯುತ್ತದೆ. ಮಣ್ಣು ಫಲವತ್ತತೆಯನ್ನು ಯಾವ ರೀತಿ ಸಮತೋಲನವಾಗಿ ಕಾಪಾಡಿಕೊಳ್ಳಬಹುದು ಎಂಬುದರ ಕುರಿತು ವಿವರಿಸಿದರು.

ಅಭಿಯಾನದಲ್ಲಿ ವಿವಿಧ ತಂತ್ರಜ್ಞಾನಗಳಾದ ಬೀಜೋಪಚಾರ, ಸುಧಾರಿತ ತಳಿಗಳು, ತೋಟಗಾರಿಕೆ ಬೆಳೆಗಳು, ವಾಣಿಜ್ಯ ಬೆಳೆಗಳು, ಎಣ್ಣೆ ಕಾಳು ಬೆಳೆಗಳು, ದ್ವಿದಳ ಬೆಳೆಗಳು, ಏಕದಳ ಬೆಳೆಗಳು, ಸಿರಿಧಾನ್ಯ ಹಾಗೂ ಅವುಗಳ ಮಹತ್ವ ಹಾಗೂ ಸಮಗ್ರ ಕೃಷಿ ಪದ್ಧತಿಗಳ ಬಗ್ಗೆ ತರಬೇತಿ ನೀಡಲಾಯಿತು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎಸ್.ಸುಹಾಸಿನಿ, ಕೃಷಿ ಅಧಿಕಾರಿ ಕಾವ್ಯಾ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶಾಂತಾ, ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಂ.ಶಿವಮಲ್ಲಪ್ಪ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಸಿದ್ದೇಶ್, ಪ್ರಗತಿಪರ ರೈತ ಮಹಿಳೆ ಮಹದೇವಮ್ಮ, ಕಿರಗಸೂರು ಶಂಕರ್, ಕೆಬ್ಬೇಹುಂಡಿ ಶಿವಕುಮಾರ್, ಕೃಷಿ ಇಲಾಖೆಯ ಶಿವಣ್ಣ, ರಾಘವೇಂದ್ರ, ಜೆಎಸ್‌ಎಸ್ ಸಂಸ್ಥೆಯ ಯೋಗೇಶ್, ಕುರುಬೂರು ಗೌರಿಶಂಕರ್, ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮತ್ತು ಕೆವಿಕೆ ಸಿಬ್ಬಂದಿ ವರ್ಗ, ತಾಲೂಕಿನ ರೈತರು, ಪ್ರಗತಿಪರ ರೈತರು ಹಾಗೂ ರೈತ ಸಂಘಟನೆಗಳ ಮುಖಂಡರು ಇದ್ದರು.