ಶ್ರೀಕಂಠೇಶ್ವರ ದೊಡ್ಡಜಾತ್ರೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಮಾಹಿತಿ ನೀಡಿದರು. 
ನ್ಯೂಸ್

ನಂಜನಗೂಡು ದೊಡ್ಡಜಾತ್ರೆಗೆ ಸಿದ್ಧತೆ ಮಾಡಿಕೊಳ್ಳಿ

ಶಿವಶಂಕರ್ ಎಂ. ಹೆಬ್ಬಳ್ಳ

ನಂಜನಗೂಡು : ಶ್ರೀಕಂಠೇಶ್ವರಸ್ವಾಮಿಯವರ ದೊಡ್ಡ ಜಾತ್ರೆ ಅಂಗವಾಗಿ ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಲಿದ್ದು ಭಕ್ತರ ಅನುಕೂಲಕ್ಕೆ ತಕ್ಕಂತೆ ದೇವಾಲಯದ ಆವರಣದಲ್ಲಿ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚನೆ ನೀಡಿದರು.

ದೇವಾಲಯದ ದಾಸೋಹ ಭವನದಲ್ಲಿ ಬುಧವಾರ ನಡೆದ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮಾ 22 ರಂದು ಶ್ರೀಕಂಠೇಶ್ವರ ಸ್ವಾಮಿಯ ಗೌಥಮ ಪಂಚ ಮಹಾರಥೋತ್ಸವ ಜರುಗಲಿದೆ. ರಾಜ್ಯದಲ್ಲಿ ಒಂದೇ ದಿನ 5 ರಥಗಳು ಸಂಚರಿಸುವುದು ಅಪರೂಪ. ಇಂತಹ ಜಾತ್ರೆಯನ್ನು ನೋಡಲು ರಾಜ್ಯದ ವಿವಿಧ ಮೂಲೆಗಳಿಂದ ಜನ ಆಗಮಿಸಲಿದ್ದಾರೆ. ಅವರಿಗೆ ತಾತ್ಕಾಲಿಕ ಶೌಚಗೃಹ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಅನುಕೂಲ ಮಾಡಿಕೊಡಬೇಕು. ಅಲ್ಲದೆ ಸಾಂಕ್ರಾಮಿಕ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು. ಪ್ರಸಾದ ವಿನಿಯೋಗ ಮಾಡಲು ಸೇವಾರ್ಥದಾರರು ಮೊದಲೇ ಪರವಾನಗಿ ಪಡೆಯಬೇಕು. ಅಲ್ಲದೆ ಪ್ರಸಾದ ವಿತರಣೆ ಸಂಧರ್ಭದಲ್ಲಿ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು. ಜತೆಗೆ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು, ಅಲ್ಲದೆ ಕಪಿಲಾ ನದಿಯ ಆಸು ಪಾಸಿನಲ್ಲಿ ನೈರ್ಮಲ್ಯ ಕಾಪಾಡಬೇಕು ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆಯವರು 5 ರಥಗಳನ್ನು ತಾಂತ್ರಿಕ ಪರೀಕ್ಷೆಗೆ ಒಳಪಡಿಸಿ ವರದಿ ನೀಡಬೇಕು, ರಥವು ಯೋಗ್ಯ ರೀತಿಯಲ್ಲಿ ಸುಸ್ಥಿತಿಯಲ್ಲಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಪ್ರಮಾಣ ಪತ್ರವಿತರಣೆಗೆ ಮುಂದಾಗಬೇಕು ಎಂದು ತಾಕೀತು ಮಾಡಿದರರು. ಅಲ್ಲದೇ ಜಾತ್ರೆ ಹಾಗೂ ತೆಪ್ಪೋತ್ಸವ ದಿನದಂದು ಕಪಿಲಾ ನದಿಗೆ ನೀರುಹರಿಸಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದರು.

ಸೆಸ್ಕ್ ವತಿಯಿಂದ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸರ್ಕಾರಿ ಕಟ್ಟಡ ದೇವಾಲಯದ ಆಸುಪಾಸಿನಲ್ಲಿ ವಿದ್ಯುತ್ ದೀಪಾಲಂಕಾರ ಮಾಡಬೇಕು. ನಗರಸಭೆ ಅಧಿಕಾರಿಗಳು ನಗರದ ಎಲ್ಲೆಡೆ ಶುಚಿತ್ವ ಕಾಪಾಡಿಕೊಳ್ಳಲು ಕ್ರಮವಹಿಸಬೇಕೆಂದು ಸೂಚನೆ ನೀಡಿದರು.

ಸುರಕ್ಷತೆಗೆ ಆದ್ಯತೆ ನೀಡಿ: ಸುರಕ್ಷತೆ ದೃಷ್ಠಿಯಿಂದ ಬಸ್‌ನಿಲ್ದಾಣ ಸೇರಿದಂತೆ ಆಯಕಟ್ಟಿನ ಪ್ರದೇಶಗಳಲ್ಲಿ ತಾತ್ಕಾಲಿಕವಾದ ಸಿಸಿ ಟಿವಿ, ಮತ್ತು ವಾಚ್ ಟವರ್‌ಗಳನ್ನು ನಿರ್ಮಿಸಲು ಕ್ರಮವಹಿಸಬೇಕು. ಅಲ್ಲದೆ ಜನಜಂಗುಳಿ ನಿಯಂತ್ರಿಸಲು ಪೊಲೀಸ್ ಅಧಿಕಾರಿಗಳು ಹೆಚ್ಚಿನ ಬಂದೋಬಸ್ತ್ ನಿಯೋಜಿಸಿಕೊಳ್ಳಲು ಮುಂದಾಗಬೇಕು, ರಥ ಎಳೆಯುವವರಿಗೆ ದೇವಾಲಯದ ವತಿಯಿಂದ ಸಮವಸ್ತ್ರ ನೀಡಲಾಗುವುದು, ಸಮವಸ್ತ್ರ ಗುರುತಿನ ಚೀಟಿ, ಸಮವಸ್ತ್ರ ಇಲ್ಲದ ವ್ಯಕ್ತಿಗಳನ್ನು ನಿಯಂತ್ರಿಸಬೇಕು ಎಂದು ತಾಕೀತು ಮಾಡಿದರು.

ಹೆಚ್ಚಿನ ಬಸ್, ರೈಲು ವ್ಯವಸ್ಥೆ ಕಲ್ಪಿಸಿ: ಜಾತ್ರೆ ದಿನದಂದು ರಾಜ್ಯದ ವಿವಿಧ ಮೂಲೆಗಳಿಂದ ಭಕ್ತಾಧಿಗಳು ಆಗಮಿಸುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯವರು ಮಾ 22 ರಿಂದ 24 ರವರೆಗೆ ಹೆಚ್ಚಿನ ಬಸ್ ಸೌಲಭ್ಯ ಮತ್ತು ಹೆಚ್ಚುವರಿ ರೈಲು ಓಡಿಸಲು ಕ್ರಮವಹಿಸಬೇಕು ಎಂದರು.

ಸಭೆಯಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ, ಜಿಪಂ ಕಾರ್ಯದರ್ಶಿ ಕೃಷ್ಣಂರಾಜು, ದೇವಾಲಯದ ಇಒ ಜಗದೀಶ್, ಆರೋಗ್ಯಾಧಿಕಾರಿ ಈಶ್ವರ್ ಕಾನಟ್ಕೆ, ಉಪ ಪೊಲೀಸ್ ವರಿಷ್ಠಾಧಿಕಾರಿ ಬಾಬು, ದೇವಾಲಯದ ಪ್ರಧಾನ ಅರ್ಚಕರಾದ ನಾಗಚಂದ್ರ ದೀಕ್ಷಿತ್, ನೀಲಕಂಠ ದೀಕ್ಷಿತ್, ಇತರರು ಇದ್ದರು.