ಕೋಲಾರ: ಸರ್ಕಾರಿ ಅಧಿಕಾರಿಗಳು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನಿಮ್ಮ ಹಂತದಲ್ಲೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು, ಜನಪ್ರತಿನಿಧಿಗಳತನಕ ಬಾರದಂತೆ ಎಚ್ಚರವಹಿಸಬೇಕು ಎಂದು ಸಂಸದ ಎಂ.ಮಲ್ಲೇಶ್‌ಬಾಬು ಸೂಚಿಸಿದರು.
ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಸದನಾಗಿ ೩ ತಿಂಗಳು ಕಳೆದರೂ ಬಹುತೇಕ ಅಧಿಕಾರಿಗಳು ಪರಿಚಯಿಸಿಕೊಳ್ಳಲು ಬಂದಿಲ್ಲ. ಇದು ವೈಯಕ್ತಿಕ ವಿಚಾರಕ್ಕಲ್ಲ, ಅಭಿವೃದ್ಧಿ ವಿಚಾರವಾಗಿ ಹೇಳಿದ್ದೇನೆ ಎಂದರು.
ಕೆಡಿಪಿ, ದಿಶಾ ಸಭೆಗಳನ್ನು ನಡೆಸದಿದ್ದರೆ ಹೇಗೆ? ಈ ಸಭೆಯ ಅನುಪಾಲನಾ ವರದಿಯು ಶಾಸಕರಿಗೆ ಸೋಮವಾರ ರಾತ್ರಿಯಷ್ಟೇ ಸೇರಿದೆ ಎಂದರೆ ಏನರ್ಥ?, ತಕ್ಷಣಕ್ಕೆ ಈ ಅಂಕಿ-ಅಂಶಗಳು ನಮಗೆ ಏನು ಅರ್ಥವಾಗುತ್ತವೆ ಎಂದು ಪ್ರಶ್ನಿಸಿದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ಸಮೃದ್ಧಿ ಮಂಜುನಾಥ್, ಬೆಳಗಿನ ಸಭೆಯ ಪುಸ್ತಕ ರಾತ್ರಿ ನೀಡುವ ನಿಯಮವಿದೆಯೇ? ರಾತ್ರಿ ನನಗೆ ನೀಡಿದರೆ ಸ್ಟಡಿ ಮಾಡುವುದು ಯಾವಾಗ?, ಸಭೆ ಮುಂದೂಡಿ. ಮುಂದಿನ ಸಭೆಗಳು ಹೇಗಿರುತ್ತವೆ ಎನ್ನುವುದನ್ನು ನೋಡುತ್ತೇನೆ ಎಂದರು.
ದಿಶಾ ಸಭೆ ನಡೆದು 8 ತಿಂಗಳಾಗಿದೆ. ಆಡಳಿತ ಎಲ್ಲಿ ಹೋಗುತ್ತಿದೆ? ಒಬ್ಬ ಅಧಿಕಾರಿಗೆ 56 ಪ್ರಭಾರ ಕೊಟ್ಟರೆ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನನಗೂ ಏನೂ ಕೆಲಸವಿಲ್ಲ, ನನ್ನನ್ನೇ ಬೇಕಾದರೆ ಯಾವುದಾದರೂ ಇಲಾಖೆಗೆ ತೆಗೆದುಕೊಳ್ಳಿ ಎಂದಾಗ ಡಿಸಿ ಅಕ್ರಂಪಾಷಾ ಅದಕ್ಕೆ ಅವಕಾಶವಿಲ್ಲ ಸರ್ ಎಂದು ಹಾಸ್ಯವಾಗಿ ನುಡಿದರು.
ಜಿಲ್ಲೆ ಮಾರಾಟಕ್ಕಿದೆಯೇ?
49 ಇಲಾಖೆಯವರು ಸಂಸದರನ್ನು ಭೇಟಿಯಾಗಿಲ್ಲ. ಸರ್ಕಾರ ಇಲ್ಲ ಬಿಡಿ, ಏನು ಮಾಡುತ್ತಾರೆ ಎನ್ನುವ ಭಾವನೆ ನಿಮ್ಮಲ್ಲಿದೆ. ಡಿಸಿ-ಎಸ್ಪಿ ಲಕ್ಷಣವಾಗಿದ್ದಾರೆ. ಅವರ ಜಾಗದಲ್ಲಿ ನಾನು ಇದ್ದಿದ್ದರೆ ಕಥೆ ಬೇರೆಯೇ ಇರುತ್ತಿತ್ತು. ಅವರು ಸುಮ್ಮನಿದ್ದಾರೆ. ನೀವು ಯಾಕೆ ಹೀಗೆ?, ನಿಮಗೆ ಆ ಸ್ಥಾನ ಏಕೆ ಬೇಕು, ಜಿಲ್ಲೆ ಮಾರಾಟಕ್ಕಿದೆಯೇ, ಶ್ರೀಮಂತರು ಹೆಚ್ಚಾಗಿದ್ದಾರೆಯೇ ಎಂದು ಅಧಿಕಾರಿಗಳ ವಿರುದ್ಧ ಸಮೃದ್ಧಿ ಮಂಜುನಾಥ್ ಕಿಡಿಕಾರಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಎಂಎಲ್ಸಿ ಇಂಚರ ಗೋವಿಂದರಾಜು, ಜಿಲ್ಲೆಯ ಅಭಿವೃದ್ಧಿ ಯಾರಿಗೂ ಬೇಕಿಲ್ಲ. ಉಸ್ತುವಾರಿ ಸಚಿವರು ಕಾಟಾಚಾರಕ್ಕೆ ಕೆಡಿಪಿ ಸಭೆ ನಡೆಸುತ್ತಾರೆ ಎಂದು ಲೇವಡಿ ಮಾಡಿದರು.
ಕೆಸಿ ವ್ಯಾಲಿ ನೀರು ಪರೀಕ್ಷೆಗೆ ಸಿದ್ಧ
ಕೆಸಿವ್ಯಾಲಿ ನೀರು ಉತ್ತಮವಾಗಿದೆ ಎಂದು ಸರ್ಕಾರ ಹೇಳುತ್ತಿದೆ, ಆದರೆ ನೀರು ಬಳಕೆ ಮಾಡುವ ರೈತರು ಹಾಳಾಗುತ್ತಿದ್ದಾರೆ. ಮಾದರಿಯನ್ನು ನನಗೆ ಕೊಡಿ ನಾನೇ ಪರೀಕ್ಷೆ ಮಾಡಿಸುತ್ತೇನೆ ಎಂದು ಸಂಸದ ಮಲ್ಲೇಶ್‌ಬಾಬು ತಿಳಿಸಿದರು. ಕೆಸಿವ್ಯಾಲಿ ನೀರು ಬಂದಿರುವ ಕಡೆಯಲ್ಲಿ ಟೊಮ್ಯಾಟೊ ಸರಿಯಾಗಿ ಬೆಳೆಯುತ್ತಿಲ್ಲ ಎಂಬ ದೂರು ಇದೆ. ಮಣ್ಣಿನ ಪರೀಕ್ಷೆಗೆ ಏಕೆ ಮುಂದಾಗುತ್ತಿಲ್ಲ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಪ್ರಶ್ನಿಸಿದರು.
ನನ್ನ ಸ್ವಗ್ರಾಮದಲ್ಲಿ ಕೆಲಸ ಮಾಡುತ್ತಿಲ್ಲ
ಮಾಲೂರು ಶೇ.94, ಕೋಲಾರ ಶೇ.82 ಪ್ರಗತಿಯಾಗಿತ್ತು, ಈಗ ಪ್ರತಿ ತಿಂಗಳು ಕುಂಠಿತವಾಗುತ್ತಿದೆ ಎಂದು ನರೇಗಾ ವಿಚಾರ ಪ್ರಸ್ತಾಪವಾದ ವೇಳೆ ಡಿಸಿ ಅಕ್ರಂಪಾಷಾ ಸಭೆಗೆ ಮಾಹಿತಿ ನೀಡಿದರು. ಆಗ ಸಂಸದ ಮಲ್ಲೇಶ್‌ಬಾಬು ಪ್ರತಿಕ್ರಿಯಿಸಿ, ಹೊನ್ನೇನಹಳ್ಳಿ ನಮ್ಮ ಪಂಚಾಯಿತಿ, ನನ್ನ ಸ್ವಗ್ರಾಮದಲ್ಲೇ ಕೆಲಸ ಮಾಡುತ್ತಿಲ್ಲ ಎಂದರೆ ಹೇಗೆ?, ನರೇಗಾದಲ್ಲಿ ಉಪಯೋಗಕರ ಕೆಲಸಗಳನ್ನು ಮಾಡಿಸಿ. ಈ ವಿಚಾರದಲ್ಲಿ ರಾಜಕೀಯ ತರಬೇಡಿ ಎಂದು ಅಽಕಾರಿಗಳಿಗೆ ತಾಕೀತು ಮಾಡಿದರು.
ಅಧಿವೇಶನದಲ್ಲಿ ಬಂಡವಾಳ ಬಯಲು
ಸರ್ವೇ ಇಲಾಖೆಯೇ ಸಿಂಡಿಕೇಟ್ ಸಂಘ ಆಗಿದೆ. ಜಿಲ್ಲೆಯಲ್ಲೇ ಅತಿ ಹೆಚ್ಚು ದರೋಡೆಯು ಈ ಇಲಾಖೆಯಲ್ಲೇ ನಡೆಯುತ್ತಿದ್ದು, ಕಿಂಗ್ ಮಾಸ್ಟರ್ ಅಧಿಕಾರಿ ಇದ್ದಾನೆ. ಎಲ್ಲ ಸಭೆಗಳನ್ನು ಕೆಆರ್‌ಪುರಂ ಗೆಸ್ಟ್ ಹೌಸ್‌ನಲ್ಲಿ ನಡೆಸುತ್ತಾನೆ. ಚಳಿಗಾಲದ ಅಧಿವೇಶನದಲ್ಲಿ ಬಂಡವಾಳ ಬಯಲು ಮಾಡುತ್ತೇನೆ ಎಂದು ಸಮೃದ್ಧಿ ಮಂಜುನಾಥ್ ಎಚ್ಚರಿಸಿದರು.
ಸಭೆಯಲ್ಲಿ ಡಿಜೆ ಸದ್ದು
ಡಿಜೆ ವಿಚಾರವಾಗಿ ಒಂದೊAದು ಕಡೆ ಒಂದೊAದು ರೀತಿ ಅನುಮತಿ ನೀಡಲಾಗಿದೆ. ಉತ್ತರ ಕರ್ನಾಟಕದಲ್ಲಿ ಅನುಮತಿ ಇದ್ದು, ಕೋಲಾರದಲ್ಲಿ ಯಾಕಿಲ್ಲ? ಜನರ ಕಾಟ ತಾಳದೆ ನಾನು ಫೋನ್ ಸ್ವಿಚ್ ಆಫ್ ಮಾಡಬೇಕಾಯಿತು. ನಾವು ಯಾವ ಹಬ್ಬವನ್ನೂ ಮಾಡುವುದು ಬೇಡವಾ ಎಂದು ಸಮೃದ್ಧಿ ಮಂಜುನಾಥ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಎಸ್ಪಿ ಬಿ.ನಿಖಿಲ್, ಮೆರವಣಿಗೆಯಲ್ಲಿ ಡಿಜೆ ಹಾಕಬೇಡಿ. ಸ್ಥಳದಲ್ಲೇ ಹಾಕಿಕೊಳ್ಳಿ ಎಂದು ತಿಳಿಸಲಾಗಿತ್ತು, ಆದರೂ ಸಹ ಗಣೇಶ ಮೂರ್ತಿಗಳ ವಿಸರ್ಜನೆಯ 3ನೇ ದಿನ ಎಲ್ಲರೂ ಹಾಕಿಕೊಂಡಿದ್ದು, ಸಮಸ್ಯೆ ಬಗೆಹರಿದಿದೆ ಎಂದು ತಿಳಿಸಿದರು.
ವಿಡಿಯೋ, ಫೋಟೋ ತೋರಿಸಬೇಕಾ?
ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ, ಆಂಧ್ರದಿಂದ ಕರ್ನಾಟಕಕ್ಕೆ ಬರುವ ಖÁಸಗಿ ಬಸ್ಸುಗಳು ಪರವಾನಗಿ ಇರುವ ಮಾರ್ಗ ಬಿಟ್ಟು ಮುಖ್ಯ ರಸ್ತೆಯಲ್ಲಿ ಹೋಗುತ್ತಿವೆ. ಆರ್‌ಟಿಒ ಅಧಿಕಾರಿಗಳು ಮುಂದಿನ ಕೆಡಿಪಿ ಸಭೆಯೊಳಗೆ ಕ್ರಮಕೈಗೊಳ್ಳದಿದ್ದರೆ ವಿಡಿಯೋ, ಫೊಟೋಗಳನ್ನು ಸಭೆಯಲ್ಲಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವರ್ತನೆ ಬದಲಾಯಿಸಿಕೊಳ್ಳಿ
ಡಿಸಿಸಿ ಬ್ಯಾಂಕಿನವರು ಮನೆಯಿಂದ ಹಣವನ್ನು ತಂದುಕೊಟ್ಟಂತೆ ಪ್ರಚಾರ ಪಡೆದುಕೊಳ್ಳುತ್ತಿದ್ದು, ಲೀಡ್ ಬ್ಯಾಂಕಿನವರು ಏಕೆ ಜನಪ್ರತಿನಿಧಿಗಳನ್ನು ಆಹ್ವಾನಿಸುತ್ತಿಲ್ಲ. ಇನ್ನಾದರೂ ವರ್ತನೆ ಬದಲಿಸಿಕೊಳ್ಳಿ ಎಂದು ಶಾಸಕ ಸಮೃದ್ಧಿ ಮಂಜುನಾಥ್ ತಾಕೀತು ಮಾಡಿದರು.