ಸೊರಬ ತಾಲೂಕಿನ ಆನವಟ್ಟಿಯಲ್ಲಿ ಆಯೋಜಿಸಿದ್ದ ಶರಣ ನುಲಿಯ ಚಂದಯ್ಯ ಜಯಂತ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಸನ್ಮಾನಿಸಲಾಯಿತು. ಕೆ.ಚಂದ್ರಪ್ಪ, ಜಿ.ಪಲ್ಲವಿ, ಶಿವಾನಂದ ಭಜಂತ್ರಿ, ಶಿವಾನಂದ ಭಜಂತ್ರಿ, ಫಕೀರಪ್ಪ ಭಜಂತ್ರಿ, ರವೀಂದ್ರಕುಮಾರ, ವಿರೂಪಾಕ್ಷಪ್ಪ ಮೇಟಿ, ದೀಪಕ್ ಇತರರಿದ್ದರು.  
ನ್ಯೂಸ್

ಸಂಕುಚಿತ ಭಾವನೆಯಿಂದ ಹೊರಬನ್ನಿ

ಶಿವಕುಮಾರ ಎಸ್.ಪಿ.

ಸೊರಬ: ರಾಜ್ಯದಲ್ಲಿ ಕೊರಮ ಸಮಾಜ ಮುಂಚೂಣಿಗೆ ಬರುವ ಮೂಲಕ ಸರ್ಕಾರದ ಒಂದು ಭಾಗ ಆಗಬೇಕು ಎಂಬುದೇ ನಮ್ಮೆಲ್ಲರ ಆಶಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ತಾಲೂಕಿನ ಆನವಟ್ಟಿಯಲ್ಲಿ ತಾಲೂಕು ಕೊರಮ ಕ್ಷೇಮಾಭಿವೃದ್ಧಿ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಶರಣ ನುಲಿಯ ಚಂದಯ್ಯ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಮಾಜ ಚಿಕ್ಕದು, ಹಿಂದುಳಿದಿದ್ದೇವೆ ಎಂದು ಸಂಕುಚಿತ ಭಾವನೆ ಹೊಂದಬಾರದು. ಬ್ರಹ್ಮಶ್ರೀ ನಾರಾಯಣಗುರು ಹೇಳಿರುವಂತೆ ಶಿಕ್ಷಣ ಮತ್ತು ಸಂಘಟನೆಗೆ ಆದ್ಯತೆ ನೀಡಬೇಕು. ಸಮಾಜದಲ್ಲಿ ಒಗ್ಗಟ್ಟಿನಿಂದ ಇದ್ದು ತಮ್ಮ ಹಕ್ಕನ್ನು ಪಡೆಯುವ ಜತೆಗೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಇಲಾಖೆಯಲ್ಲಿ ಹಂತಹಂತವಾಗಿ ಶೈಕ್ಷಣಿಕ ಬದಲಾಣೆ ತರಲಾಗುತ್ತಿದೆ. ಎಲ್ಲರಿಗೂ ಗುಣಮಟ್ಟದ ಹಾಗೂ ಸಮಾನತೆಯ ಶಿಕ್ಷಣದ ಜತೆಗೆ ಅವಕಾಶಗಳು ದೊರೆಯಬೇಕು ಎಂಬುದು ಸರ್ಕಾರದ ಉದ್ದೇಶ. ಈ ದಿಸೆಯಲ್ಲಿ ಅನೇಕ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಡತನದಲ್ಲಿರುವ ಮಕ್ಕಳು ಪೋಷಕಾಂಶದ ಕೊರತೆ ಹಾಗೂ ಹಸಿವಿನಿಂದ ಇರಬಾರದು ಎಂದು ಮೊಟ್ಟೆ, ಹಾಲು ಹಾಗೂ ರಾಗಿ ಮಾಲ್ಟ್ ಅನ್ನು 56 ಲಕ್ಷ ಮಕ್ಕಳಿಗೆ ದೊರೆಯುವಂತೆ ಮಾಡಲಾಗಿದೆ ಎಂದರು.
ಬಂಗಾರಪ್ಪ ಅವರು ಎಲ್ಲ ಸಮಾಜಕ್ಕೂ ಅನುಕೂಲವಾಗಲಿ ಎಂದು ರೈತರಿಗೆ ಉಚಿತ ವಿದ್ಯುತ್ ನೀಡಿದರು. ಕೊರಮ ಸಮಾಜದವರು ಮತ್ತು ಸ್ಥಳೀಯರಾದ ಶಹನಾಯಿ ವಾದಕ ರಾಮಣ್ಣ ಭಜಂತ್ರಿ ಅವರ ಕಲಾ ಪ್ರತಿಭೆ ಗುರುತಿಸಿ ರಾಜ್ಯಪ್ರಶಸ್ತಿ ನೀಡಿದರು. ಆದ್ದರಿಂದ ಹಿಂದುಳಿದ ಸಮಾಜ ಎಂದು ಕೇವಲ ಕಸುಬಿಗೆ ಸೀಮಿತವಾಗದೆ ಶಿಕ್ಷಣದಿಂದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಕೊರಮ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನಕ್ಕೆ ನಿವೇಶನ ನೀಡುವಂತೆ ಸಚಿವರಿಗೆ ಇದೇ ಸಂದರ್ಭ ಮನವಿ ಸಲ್ಲಿಸಲಾಯಿತು.
ತಾಲೂಕು ಕೊರಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಚಂದ್ರಪ್ಪ, ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ, ರಾಜ್ಯ ಕುಳವ ಮಹಾಸಂಘದ ಶಿವಾನಂದ ಭಜಂತ್ರಿ, ಕಾರ್ಯದರ್ಶಿ ಬಿ.ಎಸ್.ಆನಂದಕುಮಾರ ಏಕಲವ್ಯ, ಶಿವಮೊಗ್ಗದ ಫಕೀರಪ್ಪ ಭಜಂತ್ರಿ, ರವೀಂದ್ರಕುಮಾರ, ವಿರೂಪಾಕ್ಷಪ್ಪ ಮೇಟಿ, ದೀಪಕ್, ಪರಮೇಶ್ವರಪ್ಪ, ಹನುಮೇಶ್, ಮೈಲಾರಪ್ಪ, ಚಂದ್ರಶೇಖರ, ಕೆರೆಸ್ವಾಮಿ, ಆಂಜನೇಯ, ಜಗದೀಶ, ಸಂಜೀವ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ, ಅಂಜಲಿ ಸಂಜೀವ್ ಇತರರಿದ್ದರು.