ರಾಜ್ಯಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಂ.ಎ.ಶ್ರೀವತ್ಸ, ಡಾ. ವೈ.ವಿಜಯಕುಮಾರ್, ಎಸ್.ಎನ್.ನಾಗರಾಜ, ಡಾ. ಪಿ.ಮಂಜುನಾಥ, ಡಾ. ಉಷಾದೇವಿ ಇತರರಿದ್ದರು.  
ನ್ಯೂಸ್

ಎಐನಿಂದ ಹೊರಬಂದು ಹೊಸದನ್ನು ಸಂಶೋಧಿಸಿ

ಶಿವಮೊಗ್ಗ: ತಂತ್ರಜ್ಞಾನದಿಂದ ಸಿಗುವ ಆವಿಷ್ಕಾರಗಳನ್ನು ಬಳಸಿಕೊಂಡು ಕೌಶಲ ವೃದ್ಧಿಸಿಕೊಳ್ಳುವತ್ತ ಯುವ ಸಮೂಹ ಹೆಚ್ಚು ಗಮನ ಹರಿಸಬೇಕಿದೆ ಎಂದು ಬೆಂಗಳೂರಿನ ಇಂಟೆಲ್ ಟೆಕ್ನಾಲಜಿಸ್ ಸಂಸ್ಥೆಯ ಸಿಸ್ಟಂ ಪ್ರೋಗ್ರಾಮರ್ ಎಂ.ಎ.ಶ್ರೀವತ್ಸ ಅಭಿಪ್ರಾಯಪಟ್ಟರು.

ನಗರದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಆ್ಯಂಡ್ ಟೆಲಿಕಮ್ಯುನಿಕೇಷನ್ ವಿಭಾಗದಿಂದ ಶುಕ್ರವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಸಿಗ್ಮಾ-2024 ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ ಚಾಲಿತ ಜಗತ್ತಿನಲ್ಲಿ ಸ್ವತಂತ್ರ ಚಿಂತನೆಯ ಮಹತ್ವವನ್ನು ಯುವ ಸಮೂಹ ಅರಿಯಬೇಕಿದೆ ಎಂದರು.

ಕೃತಕ ಬುದ್ದಿಮತ್ತೆ ಮತ್ತು ಜಾಟ್ ಜಿಪಿಟಿ ಮುಂತಾದ ಸರ್ಚ್ ಇಂಜಿನ್‌ಗಳಿಂದ ಮಾಹಿತಿ ಪಡೆಯುವ ಯುವಸಮೂಹ, ಹೊಸತನದ ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ. ಅಂತಹ ಯಂತ್ರಾಧಾರಿತ ಕಲಿಕೆಯಿಂದ ಹೊರಬಂದು ನಾವೀನ್ಯ ಪ್ರಾಯೋಗಿಕ ಕಲಿಕೆ ಹಾಗೂ ಜ್ಞಾನದ ವಿಕಸನಕ್ಕೆ ಪುಷ್ಟಿ ನೀಡಲು ಇಂತಹ ವಿಚಾರ ಸಂಕಿರಣಗಳು ಪೂರಕವಾಗಿವೆ ಎಂದು ಹೇಳಿದರು.

ಸ್ವಯಂ ಸಂಶೋಧನೆ ಮೂಲಕ ಪಡೆದುಕೊಂಡ ವೈಯಕ್ತಿಕ ಜ್ಞಾನವು ಹೆಚ್ಚು ಕಾಲ ಉಳಿಯುತ್ತದೆ. ನಿಜವಾದ ಪರಿಣತಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. ಡೆಡ್‌ಲಾಕ್‌ನಂತಹ ತಾಂತ್ರಿಕ ಸವಾಲುಗಳನ್ನು ಎದುರಿಸುವಾಗ ನಮ್ಮ ಸ್ವಂತ ಆಲೋಚನೆಗಳಿಗೆ ಎಐನಂತಹ ತಂತ್ರಜ್ಞಾನ ಬಳಕೆಯಾಗಬೇಕು. ತಂತ್ರಜ್ಞಾನದ ಜತೆಗೆ ನಮ್ಮಲ್ಲಿನ ನಿಜವಾದ ಸೃಜನಶೀಲ ಕೌಶಲಗಳು ನಮ್ಮ ಯಶಸ್ಸಿನ ಹಾದಿಯಾಗಿ ತೆರೆದುಕೊಳ್ಳಲಿದೆ ಎಂದು ತಿಳಿಸಿದರು.

ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಪ್ರಾಚೀನ ಗ್ರೀಕ್ ವರ್ಣಮಾಲೆಯಲ್ಲಿ ಬರುವ ಸಿಗ್ಮಾ ಪರಿಕಲ್ಪನೆಯು ಉತ್ಪನ್ನಗಳ ತಯಾರಿಕೆಯಲ್ಲಿ ಅತ್ಯುತ್ತಮ ಗುಣಮಟ್ಟದ ಭರವಸೆಯನ್ನು ಸಂಕೇತಿಸುತ್ತದೆ. ಆ ಮಾದರಿಯಲ್ಲಿಯೇ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಿಗ್ಮಾದ ಪರಿಕಲ್ಪನೆಗಳಿಂದ ಪ್ರೇರಣೆ ಪಡೆದು ಗುಣಮಟ್ಟದ ಉತ್ಪನ್ನಗಳ ಆವಿಷ್ಕಾರ ಮತ್ತು ನಿರ್ವಹಣೆಯತ್ತ ಗಮನ ಕೇಂದ್ರೀಕರಿಸಬೇಕಿದೆ ಎಂದರು.

ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ. ಎಸ್.ಸತ್ಯನಾರಾಯಣ, ಡಾ. ಉಷಾದೇವಿ, ಕಾರ್ಯಕ್ರಮ ಸಂಯೋಜಕರಾದ ಡಾ. ಎಸ್.ಶಶಿಕಿರಣ್, ಡಾ. ಎಸ್.ಆರ್.ಅಶ್ವಿನಿ, ವಿದ್ಯಾರ್ಥಿ ಸಂಯೋಜಕರಾದ ಎಸ್.ಶ್ರೀನಂದ, ವೈಷ್ಣವಿ, ಆರ್.ವಂದನಾ ಮುಂತಾದವರಿದ್ದರು.

ವಿವಿಧ ಜಿಲ್ಲೆಗಳ ಸುಮಾರು 45ಕ್ಕೂ ಹೆಚ್ಚು ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿದ್ದವು. ರೋಬೋ ರೇಸ್, ಹ್ಯಾಕಥಾನ್, ಲೈನ್ ಫಾಲೋವರ್, ಅರ್ಡಿನೊ ಕ್ಲಾಷ್‌ನಂತಹ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.