ಬಾಣಂತಿಯರ ಸಾವಿಗೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿ ಅರಣ್ಯ ಮೂಲ ಬುಡಕಟ್ಟು ಒಕ್ಕೂಟ, ಡಿಎಸ್‌ಎಸ್ ಪದಾಧಿಕಾರಿಗಳು ಸಾಗರದಲ್ಲಿ ಮೆರವಣಿಗೆ ನಡೆಸಿದರು. ರಾಮಣ್ಣ ಹಸಲರು, ಲಕ್ಷ್ಮಮ್ಮ ಹಿರೇಮನೆ, ಪುಟ್ಟರಾಜು,ಶಿವಪ್ಪ, ನಾಗರತ್ನ ಇತರರಿದ್ದರು.  
ನ್ಯೂಸ್

ತಾಯಂದಿರ ಸಾವಿಗೆ ನ್ಯಾಯ ದೊರಕಿಸಿ

ಸಾಗರ: ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಣಂತಿಯರ ಸಾವಿನ ಸರಣಿ ಕೊನೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ದಿಸೆಯಲ್ಲಿ ರಾಜ್ಯದಲ್ಲಿ ಆರೋಗ್ಯ ಹಕ್ಕು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಒಕ್ಕೂಟ ಮತ್ತು ಡಿಎಸ್‌ಎಸ್ ಪದಾಧಿಕಾರಿಗಳು ಮಂಗಳವಾರ ಸಾಗರದಲ್ಲಿ ಮೆರವಣಿಗೆ ನಡೆಸಿ ಎಸಿ ಕಚೇರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಬಾಣಂತಿಯರ ಸಾವಿನ ಸರಣಿ ಹೆಚ್ಚಾಗುತ್ತಿದೆ. ಅವರಿಗೆ ಪೂರಕವಾದ ಚಿಕಿತ್ಸೆ ಸಿಗುತ್ತಿಲ್ಲ. ಎಲ್ಲರಿಗೂ ಆರೋಗ್ಯ ಸೇವೆ ಸಮರ್ಪಕವಾಗಿ ಸಿಗಬೇಕು. ಕೇರಳ, ತಮಿಳುನಾಡಿನಲ್ಲಿ ಇರುವಂತೆ ರಾಜ್ಯದಲ್ಲೂ ಆರೋಗ್ಯಹಕ್ಕು ಕಾಯ್ದೆ ಜಾರಿಗೊಳಿಸಬೇಕು ಎಂದು ಅರಣ್ಯಮೂಲ ಬುಡಕಟ್ಟು ಒಕ್ಕೂಟದ ಸಂಚಾಲಕ ರಾಮಣ್ಣ ಹಸಲರು ಒತ್ತಾಯಿಸಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ಬಾಣಂತಿಯರ ಸಾವಿಗೆ ಕಳಪೆ ಔಷಧ ನೀಡಿರುವುದೇ ಕಾರಣ ಎನ್ನಲಾಗುತ್ತಿದೆ. ಅಮಾಯಕ ಹೆಣ್ಣುಮಕ್ಕಳು ಸಾವಿಗೀಡಾಗಿದ್ದಾರೆ. ಕಳಪೆ ಔಷಧ ಪೂರೈಸಿರುವ ಕಂಪನಿಗಳನ್ನು ವಜಾ ಮಾಡಿ, ಮೃತ ಬಾಣಂತಿಯರ ಕುಟುಂಬಗಳಿಗೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಡಿಎಸ್‌ಎಸ್ ತಾಲೂಕು ಸಂಚಾಲಕ ನಾಗರಾಜ್ ಮಾತನಾಡಿ, ಚಿಕಿತ್ಸೆಗೆ ದಾಖಲಾಗಿರುವ ಬಾಣಂತಿಯರು ರಾಜ್ಯದ ಬೇರೆಬೇರೆ ಜಿಲ್ಲೆಗಳಲ್ಲಿ ಸಾವಿಗೀಡಾಗಿದ್ದಾರೆ. ಬಡವರು ಯಾವ ಔಷಧ ಕೊಟ್ಟರೂ ತೆಗೆದುಕೊಳ್ಳುತ್ತಾರೆ ಎಂಬ ಮನಸ್ಥಿತಿ ಇದ್ದಂತಿದೆ. ಮೃತರ ಕುಟುಂಬಗಳಿಗೆ ಈತನಕ ಪರಿಹಾರ ಕೊಟ್ಟಿಲ್ಲ. ಇದೊಂದು ದೊಡ್ಡ ಜಾಲ ಎಂದು ಆರೋಪಿಸಿದರು.

ಲಕ್ಷ್ಮಮ್ಮ ಹಿರೇಮನೆ, ಪುಟ್ಟರಾಜು, ಮಂಜಪ್ಪ, ಸವಿತಾ, ಶಿವಪ್ಪ, ನಾಗರತ್ನ, ನೇತ್ರಾವತಿ, ಗಂಗಮ್ಮ, ತಾರಾ, ಮಂಜುನಾಥ, ಈಶ್ವರ, ಬಂಗಾರಪ್ಪ, ನಾರಾಯಣ, ವೀರೇಶ್, ಚಂದ್ರಣ್ಣ ಇತರರಿದ್ದರು.