ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗಿದ್ದ ಹತ್ತು ದಿನದ ಬೇಸಿಗೆ ಶಿಬಿರಕ್ಕೆ ಗಣ್ಯರು ಚಾಲನೆ ನೀಡಿದರು. ಎಂ.ಬಿ.ಹಮೀದ್, ವಿ.ಎಂ.ಸುಬ್ರಮಣಿ, ಸರಸ್ವತಿ, ಡಾ.ಚೈತ್ರಾ, ಅಬ್ದುಲ್ಲ, ಮಿಲನ್, ಬಾಬು ಇತರರಿದ್ದರು.  
ನ್ಯೂಸ್

ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಿ

ನಾಪೋಕ್ಲು: ಮಕ್ಕಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳಲು ಬೇಸಿಗೆ ಶಿಬಿರ ಸಹಕಾರಿಯಾಗಿದೆ ಎಂದು ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಬಿ.ಹಮೀದ್ ಹೇಳಿದರು.

ಸಮೀಪದ ವಾಟೆಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಗ್ರಾಮ ಪಂಚಾಯಿತಿ ಅರಿವು ಕೇಂದ್ರ, ಗ್ರಾಮ ಪಂಚಾಯಿತಿ ಹೊದ್ದೂರು ಸಹಯೊಗದಲ್ಲಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗಿದ್ದ ಹತ್ತು ದಿನದ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಾಲೆಯ ಮುಖ್ಯ ಶಿಕ್ಷಕ ಕುಮಾರಸ್ವಾಮಿ ಮಾತನಾಡಿ, ಹಿಂದಿನ ದಿನಗಳಲ್ಲಿ ರಜಾ ಅವಧಿಯಲ್ಲಿ ಮಕ್ಕಳು ಸಂಬಂಧಿಕರ ಮನೆ, ಸಮಾರಂಭಗಳಿಗೆ ತೆರಳಿ ಸಂಸ್ಕೃತಿ, ಆಚಾರ, ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದರು. ಆದರೆ ಇದೀಗ ಟಿವಿ, ಮೊಬೈಲ್‌ನಿಂದಾಗಿ ದಾರಿತಪ್ಪುತ್ತಿರುವ ಮಕ್ಕಳನ್ನು ಸರಿದಾರಿಗೆ ತರಲು ಬೇಸಿಗೆ ಶಿಬಿರ ಸಹಕಾರಿಯಾಗಿದೆ. ಶಿಬಿರದಲ್ಲಿ ಮಕ್ಕಳಿಗೆ ಚಟುವಟಿಕೆ ಮೂಲಕ ಜ್ಞಾನ ತುಂಬುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.

ಎಸ್‌ಡಿಎಂಸಿ ಸದಸ್ಯ ವಿ.ಎಂ.ಸುಬ್ರಮಣಿ ಮಾತನಾಡಿ, ಶಾಲೆಯಲ್ಲಿ ಓದುವ ಮಕ್ಕಳ ಪಾಲಕರು ಹೆಚ್ಚಿನವರು ಕೂಲಿಕಾರ್ಮಿಕರಾಗಿದ್ದು ಅವರು ಕೆಲಸಕ್ಕೆ ಹೋದಾಗ ಮಕ್ಕಳು, ಮೊಬೈಲ್ ಸೇರಿದಂತೆ ಇನ್ನಿತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದ್ದರಿಂದ ಆಗುವ ಹಾನಿ ತಪ್ಪಿಸಲು ಬೇಸಿಗೆ ಶಿಬಿರ ಸಹಕಾರಿ ಎಂದರು.

ಶಿಬಿರದ ಸಂಪನ್ಮೂಲ ವ್ಯಕ್ತಿ ಹೊದ್ದೂರು ಗ್ರಾಮ ಪಂಚಾಯಿತಿ ಗ್ರಂಥಪಾಲಕಿ ಸರಸ್ವತಿ, ಮೈಸೂರು ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಸಂಸ್ಥೆಯ ಡಾ.ಚೈತ್ರಾ ಹಾಗೂ ಹೊದ್ದೂರು ಗ್ರಾಪಂ ಪಿಡಿಒ ಅಬ್ದುಲ್ಲ, ಪಂಚಾಯಿತಿ ಸಿಬ್ಬಂದಿ ಮಿಲನ್ ಮತ್ತು ಬಾಬು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.