ನ್ಯೂಸ್

ಮಾಲಿನ್ಯಕ್ಕೆ ಬೀಳಲಿ ಕಡಿವಾಣ

kumarvrl

ಮಾಲಿನ್ಯದ ಪ್ರಮಾಣ ಆತಂಕವಾಗಿ, ಅದರಲ್ಲೂ ಮಹಾನಗರಗಳಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಪರಿಣಾಮ, ಶುದ್ಧ ಕುಡಿಯುವ ನೀರು, ಶುದ್ಧ ಗಾಳಿ ಎಲ್ಲ ಮರೀಚಿಕೆ ಎಂಬಂತಾಗಿದೆ. ಹೆಚ್ಚುತ್ತಿರುವ ಕೈಗಾರಿಕೆಗಳು, ನಗರೀಕರಣದ ವೇಗಕ್ಕೆ ಬಲಿಯಾಗುತ್ತಿರುವ ಮರಗಳು, ಅಭಿವೃದ್ಧಿ ಹೆಸರಲ್ಲಿ ನೈಸರ್ಗಿಕ ಸಂಪನ್ಮೂಲಗಳ ಶೋಷಣೆ ಹೀಗೆ ವಿವಿಧ ಕಾರಣಗಳಿಂದ ಮಾಲಿನ್ಯದ ಪ್ರಮಾಣ ಹೆಚ್ಚುತ್ತಲೇ ಇದೆ. ಇವುಗಳ ಪೈಕಿ ದೊಡ್ಡ ಕೊಡುಗೆ ವಾಹನಗಳದ್ದು. ಮಹಾನಗರವಲ್ಲದೆ ಸಣ್ಣ ಪಟ್ಟಣಗಳಲ್ಲೂ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಅವು ಹೊರಹಾಕುವ ಮಾಲಿನ್ಯ ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ. ರಾಜಧಾನಿ ದೆಹಲಿಯ ಪರಿಸ್ಥಿತಿ ಹೇಗಾಗಿದೆ ಎಂಬುದರ ನಿದರ್ಶನ ನಮ್ಮ ಕಣ್ಮುಂದೆಯೇ ಇದೆ. ಈ ನಿಟ್ಟಿನಲ್ಲಿ ಪರಿಹಾರದ ಮಾರ್ಗಗಳು ಅನಾವರಣಗೊಳ್ಳುತ್ತಿರುವುದು ಮತ್ತು ಆಳುಗರು ಸಮಸ್ಯೆಯನ್ನು ಗಂಭೀರವಾಗಿ ಸ್ವೀಕರಿಸಿರುವುದು ಸಮಾಧಾನದ ಸಂಗತಿ.

ವಾಯುಮಾಲಿನ್ಯ ನಿಯಂತ್ರಿ ಸುವ ನಿಟ್ಟಿನಲ್ಲಿ ಏಪ್ರಿಲ್ 1ರಿಂದ ಭಾರತ ವಿಶ್ವದ ಅತ್ಯಂತ ಶುದ್ಧ ಪೆಟ್ರೋಲ್ ಮತ್ತು ಡೀಸೆಲ್​ನ ಮಾರಾಟ ಪ್ರಾರಂಭಿಸಲಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಯುರೋ-6 ದರ್ಜೆಯ ಪೆಟ್ರೋಲ್ ಮತ್ತು ಡೀಸೆಲ್​ನ್ನು ಪೂರೈಸಲಿವೆ. ವಿಶೇಷವೆಂದರೆ, ಭಾರತ ಕೇವಲ ಮೂರೇ ವರ್ಷದಲ್ಲಿ ಯುರೋ-6 ದರ್ಜೆಯ ತೈಲ ಮಾರಾಟದ ಗುರಿ ಸಾಕಾರಗೊಳಿಸಿಕೊಂಡಿದೆ. ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರಗಳು ಕೂಡ ಇಷ್ಟು ವೇಗವಾಗಿ ಯುರೋ-6 ದರ್ಜೆಯ ತೈಲವನ್ನು ಹೊಂದಿಲ್ಲ. ಈ ದರ್ಜೆಯ ತೈಲ ಬಳಕೆಯ ವಾಹನಗಳು ಅತ್ಯಂತ ಕಡಿಮೆ ಹೊಗೆ ಹೊರಸೂಸುವುದರಿಂದ ವಾಯುಮಾಲಿನ್ಯ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ ಹತೋಟಿಗೆ ಬರುತ್ತದೆ. ದೆಹಲಿ ಮತ್ತು ರಾಜಸ್ಥಾನ, ಉತ್ತರಪ್ರದೇಶದ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಯುರೋ-6 ತೈಲ ಮಾರಾಟ ಆರಂಭಿಸಲಾಗಿದೆ. ಈ ಮಾದರಿಯ ತೈಲ ಬಳಕೆಯಿಂದ ಪೆಟ್ರೋಲ್ ವಾಹನಗಳು ಹೊರಸೂಸುವ ಮಾಲಿನ್ಯ ಶೇಕಡ 25 ಮತ್ತು ಡೀಸೆಲ್ ವಾಹನಗಳ ಮಾಲಿನ್ಯ ಪ್ರಮಾಣ ಶೇ.75 ಕಡಿಮೆ ಆಗಲಿದೆ ಎಂಬುದು ತಜ್ಞರ ಅಂದಾಜು.

ಇದು ಉತ್ತಮ ಕ್ರಮವೇ ಹೌದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಮಾಲಿನ್ಯದ ಸಮಸ್ಯೆ ವಿರುದ್ಧ ಹೋರಾಡಲು ಇನ್ನಷ್ಟು ಪರ್ಯಾಯ ಹಾದಿಗಳತ್ತಲೂ ಹೊರಳಬೇಕಿದೆ ಎಂಬುದು ಕಾಲದ ಅನಿವಾರ್ಯತೆ. ಇಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೂ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಒಲವು ತೋರಿದೆ. ಈ ಮಧ್ಯೆ, ಪರಿಸರ ಮಾಲಿನ್ಯ ನಿಯಂತ್ರಿಸಲು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ನೆರವನ್ನು ಸುಪ್ರೀಂ ಕೋರ್ಟ್ ಕೋರಿರುವುದು ಗಮನಾರ್ಹ. ಮಾಲಿನ್ಯಮುಕ್ತವಾದ ಸಾರ್ವಜನಿಕ ಸಾರಿಗೆ ಮತ್ತು ಸರ್ಕಾರಿ ವಾಹನಗಳನ್ನು ಹಂತ ಹಂತವಾಗಿ ಪರಿಚಯಿಸುವ ಸಂಬಂಧ ಹಲವು ಕಸರತ್ತುಗಳು ನಡೆಯುತ್ತಿವೆ. ಸರ್ಕಾರ ಮತ್ತು ಶ್ರೀಸಾಮಾನ್ಯರ ಇಚ್ಛಾಶಕ್ತಿಯ ಬಲದಿಂದ ಮಾಲಿನ್ಯವನ್ನು ತಗ್ಗಿಸಬಹುದಾಗಿದ್ದು, ಇಂಧನಗಳ ಮೇಲಿನ ಅವಲಂಬನೆಯನ್ನು ತಗ್ಗಿಸಲು ಮತ್ತು ಆಮದು ಪ್ರಮಾಣಕ್ಕೆ ಕಡಿವಾಣ ಹಾಕುವತ್ತಲೂ ಚಿಂತನೆ ಮಾಡಬೇಕಿದೆ.