ನ್ಯೂಸ್

ಸೌರಮಂಡಲದ ಸಮಗ್ರ ಜ್ಞಾನ ಪಡೆಯಿರಿ

ಸೋಮಶೇಖರ ಎನ್

ಸೊರಬ: ವಿದ್ಯಾರ್ಥಿಗಳು ಸೌರಮಂಡಲದ ಬಗ್ಗೆ ಸಮಗ್ರ ಜ್ಞಾನ ಪಡೆಯಲು ಮುಂದಾಗಬೇಕು ಎಂದು ಸಮಾಜ ಸೇವಕ, ವೈದ್ಯ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.

ಹಳೇ ಸೊರಬ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿಜ್ಞಾನದ ತಳಹದಿಯಲ್ಲಿ ಆಲೋಚನೆ ಬೆಳೆಸಿಕೊಂಡಲ್ಲಿ ಉತ್ತಮ ಜ್ಞಾನ ಪಡೆಯಲು ಸಾಧ್ಯ. ಬಾಹ್ಯಾಕಾಶ ಕೌತುಕ ಸಂಗತಿಗಳನ್ನು ಅಧ್ಯಯನ ಮಾಡಲು ಪ್ರೇರೇಪಿಸುತ್ತದೆ ಎಂದು ತಿಳಿಸಿದರು.
ಮುಖ್ಯಶಿಕ್ಷಕ ಬಿ.ಓಂಕಾರಪ್ಪ ಮಾತನಾಡಿ, ಜಗತ್ತಿಗೆ ವಿಜ್ಞಾನ ಕ್ಷೇತ್ರದ ಕೊಡುಗೆ ಅಪಾರ. ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ನಡೆಸಿ ವಿಜ್ಞಾನಿಗಳಾಗುವ ಗುರಿ ಹೊಂದಬೇಕು ಎಂದು ಸಲಹೆ ನೀಡಿದರು. ಭೂಮಿ, ಗ್ರಹ, ನಕ್ಷತ್ರ ಹಾಗೂ ಗ್ಯಾಲಕ್ಸಿಗಳ ಬಗ್ಗೆ ಪಿಪಿಟಿ ಪ್ರದರ್ಶನ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಬಾಹ್ಯಾಕಾಶ ಮಾಹಿತಿ ಪುಸ್ತಕಗಳನ್ನು ಶಾಲೆಗೆ ನೀಡಲಾಯಿತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಸಂಚಾಲಕ ಕೆ.ಮೋಹನ್ ದಾಸ್, ಸಹಸಂಚಾಲಕ ಎಸ್.ಕೃಷ್ಣಾನಂದ, ನಿವೃತ್ತ ಮುಖ್ಯಶಿಕ್ಷಕ ಅಶೋಕ್ ಟೇಮ್ಕರ್, ಪತ್ರಕರ್ತ ನೋಪಿಶಂಕರ್, ಕನ್ನಡ ಉಪನ್ಯಾಸಕ ಡಾ. ಎಸ್.ಎಂ.ನೀಲೇಶ್, ಎಸ್‌ಡಿಎಂಸಿ ಸದಸ್ಯ ಕಾಳಪ್ಪ, ಶಿಕ್ಷಕರಾದ ಉಮೇಶ್ ರಾಥೋಡ್, ಸಿಂಚನಾ, ಶಿಕ್ಷಕರು, ವಿದ್ಯಾರ್ಥಿಗಳಿದ್ದರು.