ನ್ಯೂಸ್

ಹುಲಿಯೊಂದಿಗೆ ಕಾದಾಡಿ ಮಾಲೀಕನ ಪ್ರಾಣ ಉಳಿಸಿ, ನೋವಿನಿಂದಲೇ ಒದ್ದಾಡಿ ಉಸಿರು ಚೆಲ್ಲಿದ ಶ್ವಾನ! German Shepherd

ಮೋಹನ್​ ಶೆಟ್ಟಿ

German Shepherd: ತನ್ನ ಮಾಲೀಕನನ್ನು ರಕ್ಷಿಸಲು ಹುಲಿಯೊಂದಿಗೆ ಕಾದಾಡಿದ ಸಾಕು ನಾಯಿ ಜರ್ಮನ್ ಶೆಫರ್ಡ್, ಕಡೆಗೂ ತನ್ನ ಜೀವ ಅರ್ಪಿಸಿ, ಮಾಲೀಕನ ಪ್ರಾಣ ಉಳಿಸಿದ ಮನಕಲಕುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ವರದಿಯಾಗಿದೆ.

ಫೆಬ್ರವರಿ 26ರಂದು ಬಾಂಧವಗಢ ಹುಲಿ ಅಭಯಾರಣ್ಯದ ಬಳಿ ಸಂಭವಿಸಿದ ಈ ಘಟನೆಯಲ್ಲಿ ವ್ಯಾಘ್ರನಿಂದ ತನ್ನ ಮಾಲೀಕ ಶಿವಂ ಬಡ್ಗೈಯಾರನ್ನು ಪಾರು ಮಾಡಲು ಹುಲಿಯೊಂದಿಗೆ ಹೋರಾಡಿದ ಶ್ವಾನ ಬೆಂಥೋ, ಹುಲಿಯ ಕಡಿತಕ್ಕೆ ಬೆದರದೆ, ನಿರಂತರವಾಗಿ ಕಾದಾಡಿದೆ. ಅಂತಿಮವಾಗಿ ಹುಲಿ ಕಾಡಿನತ್ತ ಓಡಿದ ನಂತರ ಮಾಲೀಕನ ಬಳಿ ಶ್ವಾನ ವಾಪಾಸ್​ ಮರಳಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪ್ರೀತಿಯ ಶ್ವಾನಕ್ಕೆ ಶಿವಂ ತುರ್ತು ಚಿಕಿತ್ಸೆ ಕೊಡಿಸಿದ್ದೇ ಆದರೂ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ಘಟನೆಯ ವಿವರ

ಮನೆಯ ಹೊರಗಿದ್ದಾಗ, ಹತ್ತಿರದ ಕಾಡಿನಿಂದ ಹುಲಿ ದಾರಿ ತಪ್ಪಿ ಗ್ರಾಮದತ್ತ ಸಂಚರಿಸಿದೆ. ಹುಲಿ ಶಿವಂ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ್ದನ್ನು ಗಮನಿಸಿದ ಬೆಂಥೋ, ಹುಲಿಯನ್ನೇ ದಿಟ್ಟಿಸಿ, ಜೋರಾಗಿ ಬೊಗಳಿದೆ. ತಕ್ಷಣವೇ ಶ್ವಾನದ ಮೇಲೆ ಎರಗಿದ ವ್ಯಾಘ್ರ, ಸಾಕು ನಾಯಿಯನ್ನು ಗಂಭೀರವಾಗಿ ಗಾಯಗೊಳಿಸಿದೆ. ರಕ್ತಸ್ರಾವ ಮತ್ತು ತೀವ್ರ ನೋವಿನಿಂದ ಬಳಲುತ್ತಿದ್ದ ಶ್ವಾನವನ್ನು ತಕ್ಷಣವೇ ಶಿವಂ ಪಶುವೈದ್ಯರ ಬಳಿಗೆ ಕರೆದೊಯ್ದಿದ್ದಾರೆ. ಆದರೆ, ದುರಾದೃಷ್ಟವಶಾತ್​ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಬೆಂಥೋ ಉಸಿರು ಚೆಲ್ಲಿದೆ.

ತನ್ನ ಮಾಲೀಕನ ಪ್ರಾಣ ಉಳಿಸಲು ಹುಲಿಯೊಂದಿಗೆ ಧೈರ್ಯದಿಂದ ಕೊನೆಯವರೆಗೂ ಹೋರಾಡಿ ಜೀವಬಿಟ್ಟ ಶಿವಂ ಅವರ ಶ್ವಾನ ಬೆಂಥೋ ನೆನೆದು ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ,(ಏಜೆನ್ಸೀಸ್).