ನ್ಯೂಸ್

ಜಿನೋಮ್ ಅಕ್ಕಿ ಮಾಹಿತಿ ವೈಜ್ಞಾನಿಕ ವಂಚನೆ; ಐಸಿಎಆರ್ ವಿರುದ್ಧ ಕುಲಾಂತರಿ ಮುಕ್ತ ಭಾರತ ಒಕ್ಕೂಟದ ಆರೋಪ

ಮೋಹನ್​ ಶೆಟ್ಟಿ

ನವದೆಹಲಿ: ಜಿನೋಮ್ ಸಂಪಾದಿತ ಅಕ್ಕಿ ತಳಿಗಳ ಮಾಹಿತಿಯ ಪ್ರಚಾರದಲ್ಲಿ ವೈಜ್ಞಾನಿಕ ವಂಚನೆ ನಡೆದಿದೆ ಎಂದು ಕುಲಾಂತರಿ ಮುಕ್ತ ಭಾರತ ಒಕ್ಕೂಟ ಗುರುವಾರ ಆರೋಪಿಸಿದೆ.

ಅಖಿಲ ಭಾರತ ಸಮನ್ವಯ ಬತ್ತ ಸಂಶೋಧನಾ ಯೋಜನೆಯ (ಎಐಸಿಆರ್​ಪಿಆರ್) 2023 ಮತ್ತು 2024ರ ವಾರ್ಷಿಕ ಪ್ರಗತಿ ವರದಿಗಳ ಡೇಟಾವನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತುತಪಡಿಸಿದ ಒಕ್ಕೂಟ, ‘ಅಧಿಕೃತ ಪ್ರಾಯೋಗಿಕ ದತ್ತಾಂಶವನ್ನು ತಮಗೆ ಬೇಕಾದಂತೆ ತಿರುಚಿ ಯಶಸ್ಸಿನ ಸುಳ್ಳು ಹಕ್ಕುಗಳನ್ನು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ಕೇಂದ್ರ ಕೃಷಿ ಸಚಿವಾಲಯ ಕ್ಲೇಮ್ ಮಾಡಿವೆ’ ಎಂದು ಆಪಾದಿಸಿದೆ.

ಆರೋಪಗಳು ಎರಡು ಜಿನೋಮ್ ಸಂಪಾದಿತ ಅಕ್ಕಿ ತಳಿಗಳ ಮೇಲೆ ಕೇಂದ್ರೀಕೃತವಾಗಿವೆ. ಪುಸಾ ಡಿಎಸ್​ಟಿ-1 ಮತ್ತು ಡಿಆರ್​ಆರ್ ಧಾನ್ 100 (ಕಮಲಾ) ಇವುಗಳನ್ನು ಕೇಂದ್ರ ಕೃಷಿ ಸಚಿವ ಶಿವರಾಜ್​ಸಿಂಗ್ ಚೌಹಾಣ್ ಮೇ 4ರಂದು ಜಗತ್ತಿನಲ್ಲೇ ಮೊದಲು ಎಂಬುದಾಗಿ ಘೊಷಿಸಿದ್ದರು. ಇದರ ಹಿಂದೆ ಬಯೋಟೆಕ್ ಲಾಬಿ ಕೆಲಸ ಮಾಡಿದೆ. ಬಿಟಿ ಬದನೆಕಾಯಿ ಮತ್ತು ಜಿಎಂ ಸಾಸಿವೆಯಲ್ಲಿ ಆಗಿದ್ದಂತೆ, ಕೆಲವು ಜಿನೋಮ್ ಸಂಪಾದಿತ ತಳಿಗಳನ್ನು ಅದ್ಭುತ ಬೀಜಗಳಂತೆ ಬಿಂಬಿಸಿ ಭಾರತಕ್ಕೆ ತಳ್ಳಲಾಗುತ್ತಿದೆ ಎಂದು ಒಕ್ಕೂಟ ತಿಳಿಸಿದೆ. ಎಲ್ಲಾ ದತ್ತಾಂಶವನ್ನು ಬಹಿರಂಗಪಡಿಸಲು ಮತ್ತು ಸರಿಯಾದ ಪರೀಕ್ಷೆ ನಡೆಸಲು ಯಾವುದೇ ಹಿಂಜರಿಕೆ ಇರಬಾರದು ಎಂದು ಸ್ವತಂತ್ರ ಸಂಶೋಧಕ ಸೌಮಿಕ್ ಬ್ಯಾನರ್ಜಿ ಹೇಳಿದ್ದಾರೆ. ಕೃಷಿ ಕುರಿತ ಮಾಹಿತಿಯನ್ನು ತಿರುಚುವುದು ಲಕ್ಷಾಂತರ ರೈತರ ಜೀವನ ಮತ್ತು ಜೀವನೋಪಾಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಒಕ್ಕೂಟದ ಸದಸ್ಯೆ ಕವಿತಾ ಕುರುಗಂಟಿ ಹೇಳಿದ್ದಾರೆ.

ಆರೋಪ ತಳ್ಳಿಹಾಕಿದ ಐಸಿಎಆರ್

ಜಿನೋಮ್ ಸಂಪಾದಿತ ಅಕ್ಕಿ ತಳಿಗಳ ಪರೀಕ್ಷೆಯಲ್ಲಿ ಯಾವುದೇ ರೀತಿಯ ವಂಚನೆ, ಮಾಹಿತಿ ತಿರುಚುವಿಕೆ ನಡೆದಿಲ್ಲ ಎಂದು ಐಸಿಎಆರ್ ಸ್ಪಷ್ಟಪಡಿಸಿದೆ. ಒಕ್ಕೂಟದ ಆರೋಪಗಳು ಆಧಾರರಹಿತ. ಭಾರತೀಯ ವಿಜ್ಞಾನಿಗಳ ಸಾಧನೆಯನ್ನು ಹೀಗಳೆಯುವ ಕೃತ್ಯ ಎಂದು ಅದು ಹೇಳಿದೆ. ಎರಡೂ ತಳಿಗಳನ್ನು 24ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಟ್ಟುನಿಟ್ಟಾಗಿ ಪರೀಕ್ಷಿಸಲಾಗಿದೆ. ಜಿನೋಮ್ ಸಂಪಾದಿತ ಅಕ್ಕಿ ತಳಿಗಳಲ್ಲಿ ಯಾವುದನ್ನೂ ಮುಂಚಿತವಾಗಿ ಬಿಡುಗಡೆ ಮಾಡಿಲ್ಲ. ಪರೀಕ್ಷಾ ಫಲಿತಾಂಶಗಳನ್ನು ಉತ್ಪ್ರೇಕ್ಷೆ ಮಾಡಿಲ್ಲ ಎಂದು ಐಸಿಎಆರ್ ಹೇಳಿಕೆಯಲ್ಲಿ ತಿಳಿಸಿದೆ.