ನವದೆಹಲಿ: ನೂತನ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಮನೋಜ್ ಮುಕುಂದ್ ನರಾವಣೆ ಮಂಗಳವಾರ ಅಧಿಕಾರ ಸ್ವೀಕರಿಸಿದರು.
ಭೂಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ಇದೀಗ ಭಾರತದ ಮೂರು ರಕ್ಷಣಾ ಪಡೆಗಳ ಮೊದಲ ಮುಖ್ಯಸ್ಥರಾಗಿ ನೇಮಕವಾಗಿರುವ ಬಿಪಿನ್ ರಾವತ್ ಅವರು ನರಾವಣೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
37 ವರ್ಷಗಳ ಸುದೀರ್ಘ ಸೇವೆಯಲ್ಲಿ ನರಾವಣೆ ಅವರು ಸೇನೆಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇದಕ್ಕೂ ಮುನ್ನ ನರಾವಣೆ ಅವರು ಸೇನೆಯ ಉಪಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಸೇನಾ ನೇಮಕಾತಿಯಲ್ಲೂ ಪ್ರಮುಖ ಪಾತ್ರವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾರತದಂತಹ ಸೂಕ್ಷ್ಮ ಪ್ರದೇಶಗಳನ್ನು ಎಚ್ಚರಿಕೆಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ರೈಫಲ್ ಬೆಟಾಲಿಯನ್ ಮತ್ತು ಈಸ್ಟರ್ನ್ ಫ್ರಂಟ್ ಇನ್ಫೆಂಟ್ರಿ ಬ್ರಿಗೇಡ್ನ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಸೇನಾ ಉಪಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮುನ್ನ ಚೀನಾದೊಂದಿಗಿನ 4000 ಗಡಿ ನಿಯಂತ್ರಣ ರೇಖೆಯ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಆರ್ಮಿ ಈಸ್ಟರ್ನ್ ಕಮ್ಯಾಂಡ್ ನೇತೃತ್ವವನ್ನು ವಹಿಸಿದ್ದರು. (ಏಜೆನ್ಸೀಸ್)