ಬಾಸುಮತಿ ರಫ್ತಿಗೆ ಭಾರಿ ಹೊಡೆತ 
ನ್ಯೂಸ್

ಬಾಸುಮತಿ ರಫ್ತಿಗೆ ಭಾರಿ ಹೊಡೆತ

ಅಮೆರಿಕ-ಇರಾನ್ ಸಂಘರ್ಷದ ಪರಿಣಾಮವಾಗಿ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಪರಿಸ್ಥಿತಿ ಉದ್ಭವಿಸಿದ್ದರಿಂದ ಭಾರತದಲ್ಲಿ ಕೆಲ ತಿಂಗಳು ಕಾಲ ತೀವ್ರ ತೈಲ ಬಿಕ್ಕಟ್ಟು ಉಂಟಾಗಿತ್ತು. ಬಳಿಕ ಆ ಸಮಸ್ಯೆ ಬಹುತೇಕ ಬಗೆಹರಿದು ಪರಿಸ್ಥಿತಿ ಸುಧಾರಿಸಿದ್ದರೂ ಇದೀಗ ಭಾರತದ ಬಾಸುಮತಿ ಅಕ್ಕಿ ರಫ್ತು ಸಂಬಂಧ ಸಮಸ್ಯೆಯೊಂದು ಸೃಷ್ಟಿಯಾಗಿದೆ.
ಕೆಂಪು ಸಮುದ್ರ ಮತ್ತು ಹೊರ್ಮುಜ್ ಜಲಸಂಧಿಯಲ್ಲಿ ಮುಂದುವರಿದಿರುವ ಜಾಗತಿಕ ರಾಜಕೀಯ ಮತ್ತು ಭದ್ರತಾ ಬಿಕ್ಕಟ್ಟು ಭಾರತದ ಬಾಸುಮತಿ ಅಕ್ಕಿ ರಫ್ತು ವ್ಯಾಪಾರಕ್ಕೆ ತೀವ್ರ ಹೊಡೆತ ನೀಡಿದೆ. ಮಧ್ಯಪ್ರಾಚ್ಯ ಮತ್ತು ಯುರೋಪ್‌ಗೆ ತಲುಪಬೇಕಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ಕಿ ಸಾಗಣೆ ಸ್ಥಗಿತಗೊಂಡಿದ್ದು, ರಫ್ತುದಾರರು ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗುಜರಾತ್‌ನ ಮುಂಡ್ರಾ ಮತ್ತು ಕಾಂಡ್ಲಾ ಬಂದರುಗಳ ಕಂಟೇನರ್ ಫ್ರೈಟ್ ಸ್ಟೇಷನ್ (ಸಿಎಫ್‌ಎಸ್)ಗಳಲ್ಲಿ ಪ್ರಸ್ತುತ 5 ಲಕ್ಷ ಮೆಟ್ರಿಕ್ ಟನ್ ಬಾಸುಮತಿ ಮತ್ತು ಬಾಸುಮತಿಯೇತರ ಅಕ್ಕಿ ಗಲ್ಫ್ ದೇಶಗಳಿಗೆ ರವಾನೆಯಾಗದೆ ಬಾಕಿ ಉಳಿದಿದೆ. ಇದರಲ್ಲಿ ಬರೀ ಇರಾನ್‌ಗೇ 3 ಲಕ್ಷ ಮೆಟ್ರಿಕ್ ಟನ್ ಅಕ್ಕಿ ರಫ್ತಾಗಬೇಕಿತ್ತು.
ಹೊರ್ಮುಜ್ ಜಲಸಂಧಿ ಹಾಗೂ ಬಾಬ್ ಅಲ್-ಮಂಡೇಬ್ ಮಾರ್ಗಗಳಲ್ಲಿ ಭದ್ರತಾ ಬೆದರಿಕೆ ಹೆಚ್ಚಾಗಿರುವುದರಿಂದ ಸದ್ಯ ಹಡಗು ಯಾನ ಕಷ್ಟಕರವಾಗಿದೆ. ಭಾರತದಿಂದ ಇರಾನ್‌ನತ್ತ ಹೊರಟಿದ್ದ ಹಡಗೊಂದು ಸಮುದ್ರ ಮಾರ್ಗದ ನಿರ್ಬಂಧಗಳಿಂದಾಗಿ ಒಂದು ತಿಂಗಳ ನಂತರ ಜಾಮ್‌ನಗರ ಬಂದರಿಗೆ ವಾಪಸ್ ಬಂದಿದೆ. ಜತೆಗೆ, ಮೂರು ಪ್ರಮುಖ ಹಡಗುಗಳ ಬುಕಿಂಗ್ ರದ್ದಾಗಿದ್ದು, ಸರಕುಗಳ ರಾಶಿ ಬಂದರುಗಳಲ್ಲಿಯೇ ಉಳಿಯುವಂತಾಗಿದೆ.

ಇರಾನ್-ಸೌದಿ ಅರೇಬಿಯಾ ಬೇಡಿಕೆ ಅಧಿಕ

ಭಾರತದ ಬಾಸುಮತಿ ಅಕ್ಕಿಗೆ ಮಧ್ಯಪ್ರಾಚ್ಯವೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಅದರಲ್ಲೂ ಸೌದಿ ಅರೇಬಿಯಾ ಮತ್ತು ಇರಾನ್ ಬಹುದೊಡ್ಡ ಮಾರುಕಟ್ಟೆಗಳಾಗಿವೆ. ಸೌದಿ ಅರೇಬಿಯಾ ವರ್ಷಕ್ಕೆ 12 ಲಕ್ಷ ಮೆಟ್ರಿಕ್ ಟನ್ ಬಾಸುಮತಿ ಅಕ್ಕಿಯನ್ನು ಭಾರತದಿಂದ ಆಮದು ಮಾಡಿಕೊಳ್ಳುವ ಮೂಲಕ ಅತಿ ದೊಡ್ಡ ಗ್ರಾಹಕನಾಗಿದೆ. ಹಾಗೆಯೇ, ಇರಾನ್ ಕಳೆದ ಹಣಕಾಸು ವರ್ಷದಲ್ಲಿ 8 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಭಾರತದಿಂದ ಖರೀದಿಸಿ ಎರಡನೇ ಸ್ಥಾನದಲ್ಲಿದೆ. ಈ ಎರಡೂ ದೇಶಗಳು ಸೇರಿ ಭಾರತದ ಒಟ್ಟು ವಾರ್ಷಿಕ ಬಾಸುಮತಿ ರಫ್ತಿನ ಪೈಕಿ 20 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಆಮದು ಮಾಡಿಕೊಳ್ಳುತ್ತವೆ. ಪ್ರಸ್ತುತ ಈ ಪ್ರಮುಖ ಸಮುದ್ರ ಮಾರ್ಗಗಳು ಬಂದ್ ಆಗಿರುವುದರಿಂದ ಭಾರತದ ಕೃಷಿ ರಫ್ತು ಮತ್ತು ಜಾಗತಿಕ ಆಹಾರ ಸರಬರಾಜು ಜಾಲದ ಮೇಲೆ ತೀವ್ರ ಪರಿಣಾಮ ಬೀರಿದೆ.

ಸಾಗಣೆ ವೆಚ್ಚ ಏರಿಕೆ

ಕೆಂಪು ಸಮುದ್ರದ ಬಿಕ್ಕಟ್ಟಿನಿಂದಾಗಿ ಹಡಗುಗಳು ಸುದೀರ್ಘ ಪರ್ಯಾಯ ಮಾರ್ಗಗಳನ್ನು ಬಳಸಿ ಸಂಚರಿಸಬೇಕಾಗಿದೆ. ಇದರಿಂದಾಗಿ ಸಮುದ್ರ ಸಾಗಣೆ ವೆಚ್ಚ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಮರೈನ್ ಇನ್ಶೂರೆನ್ಸ್ ಪ್ರೀಮಿಯಂ ದರಗಳು ಕೂಡ ಗಗನಕ್ಕೇರಿದ್ದು, ರಫ್ತು ವೆಚ್ಚವನ್ನು ಅಪಾರವಾಗಿ ಹೆಚ್ಚಿಸಿವೆ. ಸರಕು ತಲುಪುವುದು ಕೂಡ ವಿಳಂಬವಾಗುತ್ತಿದ್ದು, ಮಧ್ಯಪ್ರಾಚ್ಯ ಹಾಗೂ ಯುರೋಪ್ ಮಾರುಕಟ್ಟೆಗಳಲ್ಲಿ ಭಾರತದ ಅಕ್ಕಿಯ ಬೆಲೆ ದುಬಾರಿಯಾಗುತ್ತಿದೆ. ಈ ಜಲಮಾರ್ಗಗಳಲ್ಲಿ ಶೀಘ್ರವೇ ಶಾಂತಿ ಮತ್ತು ಸಹಜ ಸ್ಥಿತಿ ಮರುಕಳಿಸದಿದ್ದರೆ ಭಾರತದ ಕೃಷಿ ಕ್ಷೇತ್ರ ಮತ್ತು ರಫ್ತುದಾರರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುವ ಭೀತಿ ಎದುರಾಗಿದೆ ಎಂದು ಬಾಸುಮತಿ ಅಕ್ಕಿ ಗಿರಣಿ ಮಾಲೀಕರು ಮತ್ತು ರಫ್ತುದಾರರ ಸಂಘ (ಬಿಆರ್‌ಎಂಇಎ)ದ ಅಧ್ಯಕ್ಷ ಬಾಲಕೃಷ್ಣನ್ ಬಾಲಿ ತಿಳಿಸಿದ್ದಾರೆ.

ರಫ್ತುದಾರರಿಗೆ ಹಣಕಾಸಿನ ಅಭಾವ

ಜಾಗತಿಕ ಅಕ್ಕಿ ವ್ಯಾಪಾರದಲ್ಲಿ ಭಾರತವು ಶೇಕಡ 45ರಷ್ಟು ಪಾಲು ಹೊಂದಿದ್ದು, 140ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತದೆ. ಆದರೆ, ಈ ಬಿಕ್ಕಟ್ಟಿನಿಂದಾಗಿ 2026ರ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ಅಕ್ಕಿ ರಫ್ತು ಶೇ.7.5ರಷ್ಟು ಕುಸಿದು 11.53 ಬಿಲಿಯನ್ ಡಾಲರ್‌ಗೆ ತಲುಪಿದೆ. "ಭತ್ತದ ಖರೀದಿ, ಗಿರಣಿ ಸಂಸ್ಕರಣೆ, ಪ್ಯಾಕಿಂಗ್ ಮತ್ತು ಸಾಗಣೆ ವೆಚ್ಚಕ್ಕಾಗಿ ರಫ್ತುದಾರರು ಭಾರಿ ಪ್ರಮಾಣದ ಬಂಡವಾಳ ಹೂಡಿದ್ದಾರೆ. ಈಗ ಬಂದರುಗಳಲ್ಲಿ ಸರಕುಗಳು ವಾರಗಟ್ಟಲೆ ನಿಂತಿರುವುದರಿಂದ ಹಣಕಾಸಿನ ಹರಿವು ಸಂಪೂರ್ಣ ಸ್ಥಗಿತಗೊಂಡಿದೆ. ಬ್ಯಾಂಕ್‌ಗಳ ಬಡ್ಡಿ ಹೆಚ್ಚಾಗುತ್ತಿದ್ದು, ರಫ್ತುದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ" ಎಂದು ಬಾಸುಮತಿ ಅಕ್ಕಿ ಗಿರಣಿ ಮಾಲೀಕರು ಮತ್ತು ರಫ್ತುದಾರರ ಸಂಘ (ಬಿಆರ್‌ಎಂಇಎ)ದ ಉಪಾಧ್ಯಕ್ಷ ರಂಜಿತ್ ಸಿಂಗ್ ಜೋಸನ್ ಕಳವಳ ವ್ಯಕ್ತಪಡಿಸಿದ್ದಾರೆ.