ನ್ಯೂಸ್

ಜಿಡಿಪಿಗೆ ಕರೊನಾ ಗುದ್ದು; ಮೊದಲ ತ್ರೖೆಮಾಸಿಕದಲ್ಲಿ ಶೇ.3.9ಕ್ಕೆ ಕುಸಿತ; ಲಾಕ್​ಡೌನ್​ನಿಂದ ಭಾರಿ ನಷ್ಟ

rameshmysuru

ನವದೆಹಲಿ: ವಿಶ್ವವನ್ನೇ ಕಾಡುತ್ತಿರುವ ಕರೊನಾ ಸೋಂಕು ನಿರೀಕ್ಷೆಯಂತೆ ಭಾರತದ ಆರ್ಥಿಕತೆಗೆ ಬಲವಾದ ಹೊಡೆತ ನೀಡಿದೆ. 2020-21ರ ಮೊದಲ ತ್ರೖೆಮಾಸಿಕದಲ್ಲಿ ಒಟ್ಟಾರೆ ದೇಶೀಯ ಉತ್ಪನ್ನ ದರ (ಜಿಡಿಪಿ) ಋಣಾತ್ಮಕ ಬೆಳವಣಿಗೆ ದಾಖಲಿಸಿದ್ದು -23.9%ಕ್ಕೆ ಕುಸಿದಿದೆ. ಈ ಹಿನ್ನಡೆ ಜಿ-20 ರಾಷ್ಟ್ರಗಳ ಯಾವುದೇ ದೇಶಕ್ಕಿಂತ ಅತ್ಯಂತ ಕೆಳಮಟ್ಟದ್ದಾಗಿದೆ ಎಂಬುದು ಸಮಸ್ಯೆಯ ಗಂಭೀರತೆಗೆ ನಿದರ್ಶನ. ಈ ನಡುವೆಯೇ, ಕೇಂದ್ರ ಸರ್ಕಾರ ಮತ್ತು ಆರ್​ಬಿಐ ಆರ್ಥಿಕತೆ ಚೇತರಿಕೆಗೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಗೊತ್ತಾಗಬೇಕಿದೆ.

ಆರ್ಥಿಕತೆ ಈ ಪರಿಯಲ್ಲಿ ತತ್ತರಿಸಲು ಸೋಂಕು ಪ್ರಸರಣ ತಡೆಗೆ ವಿಧಿಸಲಾದ ಲಾಕ್​ಡೌನ್ ಹಾಗೂ ಅದರ ಪರಿಣಾಮವಾಗಿ ವ್ಯಾಪಾರೋದ್ಯಮ ನೆಲಕಚ್ಚಿದ್ದು, ಗ್ರಾಹಕರ ಬೇಡಿಕೆಯಲ್ಲಿ ಉಂಟಾದ ತೀವ್ರ ಇಳಿಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್​ನಿಂದ ಜೂನ್​ವರೆಗಿನ ಮೊದಲ ತ್ರೖೆಮಾಸಿಕದ ವರದಿಯನ್ನು ಬಿಡುಗಡೆ ಮಾಡಿದ್ದು, ಕಳೆದ ಎಂಟು ವರ್ಷಗಳಲ್ಲಿ ಅತ್ಯಂತ ಕಳಪೆಯ ಜಿಡಿಪಿ ಇದಾಗಿದೆ. 2019-20ರ ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ ಶೇ. 5.2 ವೃದ್ಧಿ ದಾಖಲಿಸಿತ್ತು. 1996ರಿಂದ ಭಾರತದಲ್ಲಿ ತ್ರೖೆಮಾಸಿಕವಾಗಿ ಜಿಡಿಪಿ ವರದಿ ನೀಡುವ ಪರಿಪಾಠ ರೂಢಿಯಲ್ಲಿದೆ. ಇಷ್ಟು ಕಳಪೆ ಜಿಡಿಪಿ ಯಾವತ್ತೂ ದಾಖಲಾಗಿರಲಿಲ್ಲ.

ಏಪ್ರಿಲ್ ಮತ್ತು ಮೇನಲ್ಲಿ ಲಾಕ್​ಡೌನ್ ನಿರ್ಬಂಧ ಕಠಿಣವಾಗಿದ್ದ ಕಾರಣ ಈ ಎರಡೂ ತಿಂಗಳು ವ್ಯಾಪಾರೋದ್ಯಮದಲ್ಲಿ ತೀವ್ರವಾದ ನಷ್ಟ ಉಂಟಾಗಿದೆ. ಜೂನ್​ನಿಂದ ನಿರ್ಬಂಧಗಳು ಸಡಿಲವಾದರೂ ವ್ಯಾಪಾರೋದ್ಯಮ ನಿರೀಕ್ಷೆಯಂತೆ ಚೇತರಿಕೆ ವೇಗ ಪಡೆದಿಲ್ಲ, ಕೋವಿಡ್-19 ಪೂರ್ವಸ್ಥಿತಿಗೆ ಮರಳಲಿಲ್ಲ ಎಂದು ಎನ್​ಎಸ್​ಒ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆರ್ಥಿಕತೆ ಬೆಳವಣಿಗೆ ಇದೇ ರೀತಿ ಮುಂದುವರಿದರೆ ಎರಡು ಮತ್ತು ಮೂರನೇ ತ್ರೖೆಮಾಸಿಕದಲ್ಲೂ ಜಿಡಿಪಿ ಶೇ. 8.1 ಮತ್ತು ಶೇ. 1.0 ತಗ್ಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದಿಂದ ಹಲವು ಕ್ರಮ: ಆರ್ಥಿಕತೆಗೆ ಪುನಶ್ಚೇತನ ನೀಡಲು ಆರ್​ಬಿಐ ಮತ್ತು ಸರ್ಕಾರ ಅನೇಕ ಉಪಕ್ರಮಗಳನ್ನು ಕೈಗೊಂಡಿವೆ. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದೆ. ಜನರು ಮತ್ತು ಉದ್ಯಮಗಳಲ್ಲಿ ಹಣದ ಹರಿವು (ಲಿಕ್ವಿಡಿಟಿ) ಹೆಚ್ಚಿಸಲು ಅನೇಕ ಸಾಲ ಯೋಜನೆಗಳನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲು ಮುಂದಾಗಿದೆ. ಸಾಲಗಳಿಗೆ ಸರ್ಕಾರವೇ ಖಾತರಿಯಾಗುವುದಾಗಿ ಅಭಯ ನೀಡಿದೆ. ಆರ್​ಬಿಐ ಮೂಲ ಬಡ್ಡಿದರದಲ್ಲಿ (ರೆಪೊ) 115 ಮೂಲಾಂಶವನ್ನು ಕಡಿತ ಮಾಡಿದೆ. ಸಾಲದ ಕಂತು ಪಾವತಿಗೆ ಈಗಾಗಲೇ ಆರು ತಿಂಗಳು ವಿನಾಯಿತಿ ಪ್ರಕಟಿಸಿದೆ. ಆಗಸ್ಟ್ ಎರಡನೇ ವಾರದಲ್ಲಿ ಸರ್ಕಾರಕ್ಕೆ 57 ಸಾವಿರ ಕೋಟಿ ರೂ.ಗಳ ಲಾಭಾಂಶವನ್ನು ವರ್ಗಾಯಿಸಿದೆ. ಇನ್ನೂ ಉತ್ತೇಜನಕಾರಿ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ಸರ್ಕಾರ ಮತ್ತು ಆರ್​ಬಿಐ ಪುನರುಚ್ಚರಿಸುತ್ತಿವೆ. ಜತೆಗೆ, ಸರ್ಕಾರ ಆತ್ಮನಿರ್ಭರ ಪರಿಕಲ್ಪನೆಯನ್ನು ಮಂಡಿಸಿ, ಹಲವು ಹೆಜ್ಜೆಗಳನ್ನು ಇರಿಸಿದೆ. ಇಷ್ಟೆಲ್ಲ ಆದರೂ ಆರ್ಥಿಕತೆಯಲ್ಲಿ ದಿಢೀರ್ ಚೇತರಿಕೆ ಆಗುವುದಿಲ್ಲ, ಕ್ರಮೇಣ ವೃದ್ಧಿ ಕಾಣುತ್ತದೆ ಎಂದು ತಜ್ಞರು ಹೇಳಿದ್ದಾರೆ.

ತಯಾರಿಕಾ ವಲಯ ಕ್ಷೀಣ: ಭಾರತದ ತಯಾರಿಕಾ ವಲಯದ ಪ್ರಗತಿ ಕಳೆದ ಏಪ್ರಿಲ್​ನಿಂದ ಇಳಿಮುಖವಾಗಿಯೇ ಇದೆ. ಜೂನ್​ನಲ್ಲಿ ಶೇ. 47.2 ಇದ್ದ ಪಿಎಂಐ ಜುಲೈನಲ್ಲಿ ಶೇ. 46ಕ್ಕೆ ಇಳಿದಿದೆ. ಒಟ್ಟಾರೆ ಶೇ. 39.3 ಕುಸಿತ ಕಂಡಿದೆ. ದೇಶ ಜಿಡಿಪಿಯಲ್ಲಿ ಶೇ.18 ಪಾಲನ್ನು ತಯಾರಿಕಾ ವಲಯ ಹೊಂದಿದ್ದು, ಒಟ್ಟಾರೆ ಜನಸಂಖ್ಯೆಯ ಶೇ. 12ರಷ್ಟು ಮಂದಿಗೆ ಈ ವಲಯ ಉದ್ಯೋಗ ಕಲ್ಪಿಸಿದೆ.

20 ಸಾವಿರ ಕೋಟಿ ರೂ. ಸರ್ಕಾರಿ ಬಾಂಡ್ ಕ್ರಯ-ವಿಕ್ರಯ: ತೆವಳುತ್ತಿರುವ ಮಾರುಕಟ್ಟೆಗೆ ವೇಗ ನೀಡಲು ಆರ್​ಬಿಐ ಇನ್ನಷ್ಟು ಉಪಕ್ರಮವನ್ನು ಸೋಮವಾರ ಘೋಷಿಸಿದ್ದು, ಸರ್ಕಾರಿ ಬಾಂಡ್​ಗಳ ಖರೀದಿ ಮತ್ತು ವಿಕ್ರಯಕ್ಕೆ ಮುಂದಾಗಿದೆ. 20 ಸಾವಿರ ಕೋಟಿ ರೂ. ಮೌಲ್ಯದ ಸರ್ಕಾರಿ ಬಾಂಡ್​ಗಳನ್ನು ತಲಾ 10 ಸಾವಿರ ಕೋಟಿ ರೂ.ಗಳಂತೆ ಎರಡು ಹಂತದಲ್ಲಿ ಖರೀದಿ ಮತ್ತು ವಿಕ್ರಯಕ್ಕೆ ಸೆ. 10 ಮತ್ತು 17ರಂದು ಪ್ರಕ್ರಿಯೆ ನಡೆಯಲಿದೆ.

ಚೇತರಿಕೆ ಕಂಡ ಕೃಷಿ ವಲಯ: ಕರೊನಾ ಕಾರಣ ಎಲ್ಲ ಕ್ಷೇತ್ರದಲ್ಲಿ ಹಿನ್ನಡೆಯಾದರೂ ಕೃಷಿ ವಲಯದಲ್ಲಿ ಶೇ. 3.4 ಏರಿಕೆ ಕಂಡಿದೆ. ಗ್ರಾಮೀಣ ಭಾಗದಲ್ಲಿ ಚೇತರಿಕೆ ಕಾಣಿಸುತ್ತಿದೆ. ಮುಂಗಾರು ಉತ್ತಮವಾಗಿರುವ ಕಾರಣ ಈ ಸಾರಿಯ ಮುಂಗಾರು ಹಂಗಾಮಿನಲ್ಲಿ 1,082 ಲಕ್ಷ ಹೆಕ್ಟೇರ್​ನಲ್ಲಿ ಬಿತ್ತನೆಯಾಗಿದೆ. ಇದು ಕಳೆದ ವರ್ಷಕ್ಕಿಂತ (1,010 ಲಕ್ಷ ಹೆಕ್ಟೇರ್) ಶೇ. 7 ಅಧಿಕ. ಹೀಗಾಗಿ ಹೆಚ್ಚಿನ ಇಳುವರಿ ನಿರೀಕ್ಷಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.

ಯಾವ್ಯಾವ ಕ್ಷೇತ್ರಕ್ಕೆ ಹೊಡೆತ: ಕರೊನಾ ದುಷ್ಪರಿಣಾಮ ಪ್ರತಿಯೊಂದು ಕ್ಷೇತ್ರ ಮತ್ತು ಸಮಾಜದ ಪ್ರತಿ ವ್ಯಕ್ತಿಯ ಮೇಲೂ ಆಗಿದೆ. ಆದರೆ, ಆರ್​ಬಿಐ ವರದಿ ಪ್ರಕಾರ ಕರೊನಾದ ದುಷ್ಪರಿಣಾಮವು ಸಾರಿಗೆ, ಆತಿಥ್ಯ, ಮನರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೇಲೆ ವಿಪರೀತವಾಗಿದೆ.

ಹಿನ್ನಡೆಗೆ ಕಾರಣ:

  1. ಭಾರತ ಏಷ್ಯಾದಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿದ ರಾಷ್ಟ್ರ ಎನಿಸಿದರೂ ವಸೂಲಾಗದ ಸಾಲ, ಅನುತ್ಪಾದಕ ಆಸ್ತಿ (ಎನ್​ಪಿಎ) ಏರಿಕೆಯಿಂದ ಬ್ಯಾಂಕ್​ಗಳು ತತ್ತರಿಸಿದ್ದು
  2. ಹೊಸ ಸಾಲ ನೀಡಲು ಬ್ಯಾಂಕ್​ಗಳು ಹಿಂದೇಟು ಹಾಕಿದ್ದರಿಂದಾಗಿ ಒಟ್ಟು ಜಿಡಿಪಿಯ ಶೇ.60ರಷ್ಟರ ಮೇಲೆ ಪರಿಣಾಮ ಉಂಟಾಯಿತು. ಹೀಗಾಗಿ ಆರ್ಥಿಕತೆ ಕುಂಟುತ್ತಲೇ ಸಾಗಿತ್ತು
  3. 2019-20ರ ಕಡೆಯ ತ್ರೖೆಮಾಸಿಕದಲ್ಲಿ ಚೇತರಿಕೆ ಕಾಣಲಿದೆ ಎಂಬ ಹೊತ್ತಿಗೆ ದೇಶದಲ್ಲಿ ಕರೊನಾ ಸೋಂಕು ವ್ಯಾಪಕವಾಗತೊಡಗಿತು
  4. ಲಾಕ್​ಡೌನ್ ಕಾರಣ ದೇಶದಲ್ಲಿ ಚಟುವಟಿಕೆಗಳೇ ಇಲ್ಲದಂತಾಗಿ ಮೊದಲೇ ಮಂದಗತಿಯಲ್ಲಿದ್ದ ಆರ್ಥಿಕತೆ ಕುಸಿಯಿತು

ವಿದೇಶಗಳಲ್ಲೂ ಇದೇ ಸ್ಥಿತಿ:

  • ಚೀನಾ: 2020-21ರ ಮೊದಲ ತ್ರೖೆಮಾಸಿಕದ ಜಿಡಿಪಿ ಶೇ. 3.2. ಕಳೆದ ಜನವರಿ-ಮಾರ್ಚ್​ನಲ್ಲಿ ಶೇ. 6.8ರಷ್ಟು ಇಳಿಕೆ
  • ಅಮೆರಿಕ: 2020ರ ಮೊದಲ ತ್ರೖೆಮಾಸಿಕದ ಜಿಡಿಪಿ ಶೇ. 4.8 ಇಳಿಕೆ. 2019ರ ಕಡೆಯ ತ್ರೖೆಮಾಸಿಕದಲ್ಲಿ ಶೇ. 2.1 ವೃದ್ಧಿ
  • ಬ್ರಿಟನ್:2020ರ ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ ಶೇ. 2.2 ಕುಸಿತ. ಎರಡನೇ ತ್ರೖೆಮಾಸಿಕದಲ್ಲಿ ಶೇ. 20.4 ಇಳಿಕೆ. 2019ರ ಕಡೆಯ ತ್ರೖೆಮಾಸಿಕದಲ್ಲಿ ಶೇ. 0.5 ಪ್ರಗತಿ.

ವಲಯಗಳ ಕುಸಿತ

  • ತಯಾರಿಕೆ- ಶೇ. 39.3
  • ನಿರ್ಮಾಣ- ಶೇ. 50.3
  • ಗಣಿಗಾರಿಕೆ- ಶೇ. 23.3
  • ವಿದ್ಯುತ್- ಶೇ. 7
  • ರಿಯಲ್ ಎಸ್ಟೇಟ್, ವೃತ್ತಿಪರ ಸೇವೆಗಳು ಶೇ. 5.3

ಜಿಡಿಪಿ ಪ್ರಗತಿ (201920)

  • ಮೊದಲ ತ್ರೖೆಮಾಸಿಕ ಶೇ. 5.2
  • ಎರಡನೇ ತ್ರೖೆಮಾಸಿಕ ಶೇ. 4.4
  • ಮೂರನೇ ತ್ರೖೆಮಾಸಿಕ 4.1
  • ನಾಲ್ಕನೇ ತ್ರೖೆಮಾಸಿಕ 3.1
ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ ಇಳಿಕೆಯಾಗಿದ್ದರೂ ಮುಂದಿನ ತ್ರೖೆಮಾಸಿಕಗಳಲ್ಲಿ ಆರ್ಥಿಕತೆ ಬೆಳವಣಿಗೆ ಕಾಣಲಿದೆ. ವಿವಿಧ ವಲಯಗಳಲ್ಲಿ ‘- ಆಕಾರ’ದ ವೃದ್ಧಿ ದಾಖಲಾಗಲಿದೆ. ಇದಕ್ಕೆ ರೈಲ್ವೆಯ ಸರಕು ಸಾಗಣೆಯಲ್ಲಿ ಆಗಿರುವ ಬೆಳವಣಿಗೆ ದಿಕ್ಸೂಚಿ ಆಗಿದೆ. ಜುಲೈನಲ್ಲಿ ಶೇ. 95 ಪ್ರಗತಿ ಸರಕು ಸಾಗಣೆಯಲ್ಲಿ ದಾಖಲಾಗಿದೆ. ಇದೇ ರೀತಿ ವಿದ್ಯುತ್, ಇ-ವೇ ಬಿಲ್​ನಲ್ಲೂ ಪ್ರಗತಿಯಾಗಿದೆ.  | ಕೆ.ವಿ. ಸುಬ್ರಮಣಿಯನ್ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ https://www.vijayavani.net/banks-should-not-charge-on-upi-digital-payments/