Global Chess League: ಫೈಯರ್ಸ್ ಅಮೆರಿಕನ್ ಗ್ಯಾಂಬಿಟ್ಸ್ ವಿರುದ್ಧ ಗೆದ್ದ ಆಲ್ಪೈನ್ ಪೈಪರ್ಸ್‌ಗೆ ಅಗ್ರಸ್ಥಾನ
- ಅಲಾಸ್ಕನ್ ನೈಟ್ಸ್ ವಿರುದ್ಧ ಸೋತ ಬಳಿಕ 15-3 ಅಂತರದಲ್ಲಿ ಗ್ಯಾಂಬಿಟ್ಸ್ ತಂಡವನ್ನು ಮಣಿಸಿದ ಪೈಪರ್ಸ್
- ಮುಂಬಾ ಮಾಸ್ಟರ್ಸ್‌ಗೆ 12-3 ಅಂತರದ ಗೆಲುವು
ಬೆಂಗಳೂರು: (Global Chess League) ಗ್ಲೋಬಲ್ ಚೆಸ್ ಲೀಗ್ (ಜಿಸಿಎಲ್) ಹಾಲಿ ಚಾಂಪಿಯನ್ ಆಲ್ಪೈನ್ ಎಪಿಎಲ್ ಪೈಪರ್ಸ್ ಸೋಮವಾರ ನಡೆದ ಎರಡು ಪಂದ್ಯಗಳಲ್ಲಿ ಮಿಶ್ರ ಫಲ ಅನುಭವಿಸಿದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಟೆಕ್ ಮಹೀಂದ್ರಾ ಮತ್ತು ಫಿಡೆ ಜಂಟಿಯಾಗಿ ಆಯೋಜಿಸಿರುವ ಜಿಸಿಎಲ್‌ನ ನಾಲ್ಕನೇ ಆವೃತ್ತಿಯ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿವೆ.
ದಿನದ ಮೊದಲ ಪಂದ್ಯದಲ್ಲಿ ಪಿಬಿಜಿ ಅಲಾಸ್ಕನ್ ನೈಟ್ಸ್ ವಿರುದ್ಧ 7-9 ಅಂತರದಲ್ಲಿ ಸೋತ ಪೈಪರ್ಸ್, ಬಳಿಕ ಅಮೆರಿಕನ್ ಗ್ಯಾಂಬಿಟ್ಸ್ ವಿರುದ್ಧ 15-3 ಅಂತರದ ಭರ್ಜರಿ ಗೆಲುವು ದಾಖಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಗೆಲುವಿನೊಂದಿಗೆ ಅವರು ಅಂಕಪಟ್ಟಿಯಲ್ಲಿಮೊದಲ ಸ್ಥಾನ ಪಡೆದರು. ಮತ್ತೊಂದು ಪಂದ್ಯದಲ್ಲಿ ಚೆಕ್ ಮುಂಬಾ ಮಾಸ್ಟರ್ಸ್ ತಂಡವು ಗಂಗಾಸ್ ಗ್ರ್ಯಾಂಡ್ ಮಾಸ್ಟರ್ಸ್ ವಿರುದ್ಧ 12-3 ಅಂತರದಲ್ಲಿ ಜಯ ಗಳಿಸಿ ಎರಡನೇ ಸ್ಥಾನಕ್ಕೇರಿತು.
ಆರಂಭಿಕ ಪಂದ್ಯದಲ್ಲಿ ಸೋತ ಬಳಿಕ ಪೈಪರ್ಸ್ ಭರ್ಜರಿ ಪುನರಾಗಮನ ಮಾಡಿದ್ದು ದಿನದ ಪ್ರಮುಖ ಆಕರ್ಷಣೆಯಾಗಿತ್ತು. ಇದು ಜಿಸಿಎಲ್‌ನ ನಾಲ್ಕನೇ ಆವೃತ್ತಿಯಲ್ಲಿದಾಖಲಾದ ಅತಿ ದೊಡ್ಡ ಗೆಲುವಿನ ಅಂತರ ಇದಾಗಿದೆ.
ವಿದಿತ್ ಗುಜರಾತಿ ಮತ್ತು ಕೋನೇರು ಹಂಪಿ ಮತ್ತೊಮ್ಮೆ ತಂಡದ ಗೆಲುವಿನಲ್ಲಿಪ್ರಮುಖ ಪಾತ್ರ ವಹಿಸಿದರು. ಇಬ್ಬರೂ ನಾಲ್ಕು ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿದರು. ಸಮಯದ ಒತ್ತಡದ ನಡುವೆಯೂ ವಿದಿತ್ ದನಿಯಿಲ್ ದುಬೊವ್ ಅವರನ್ನು ಸೋಲಿಸಿದರು. ಹಂಪಿ 29 ನಡೆಗಳಲ್ಲಿಸಾರಾ ಖಾದೆಮ್ ಅವರನ್ನು ಮಣಿಸಿದರು. ಪ್ರಾಡಿಜಿ ಬೋರ್ಡ್‌ನಲ್ಲಿವೊಲೊಡಾರ್ ಮುರ್ಜಿನ್, ಮಾರ್ಕ್ ಅಂದ್ರಿಯಾ ಮೌರಿಜ್ಜಿ ಅವರನ್ನು ಸೋಲಿಸಿ ತಂಡದ ಪರ ಮೂರನೇ ಗೆಲುವು ದಾಖಲಿಸಿದರು.
‘‘ಬೆಳಗಿನ ಪಂದ್ಯದಲ್ಲಿಪರಿಸ್ಥಿತಿ ಸಮಬಲದಲ್ಲಿತ್ತು. ಆದರೆ ನನಗೆ ಸಮಯದ ಒತ್ತಡ ಎದುರಾಯಿತು. ಎರಡನೇ ಪಂದ್ಯದಲ್ಲೂ ಒತ್ತಡವಿತ್ತು. ಆದರೂ ಗೆಲುವು ಸಾಧಿಸಿದ್ದಕ್ಕೆ ಸಂತೋಷವಾಗಿದೆ,’’ ಎಂದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ವಿದಿತ್ ಹೇಳಿದರು.
ಇದಕ್ಕೂ ಮುನ್ನ ನಡೆದ ಆರಂಭಿಕ ಮುಖಾಮುಖಿಯ ಪ್ರಮುಖ ಆಕರ್ಷಣೆ ಐಕಾನ್ ಬೋರ್ಡ್‌ನಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಮತ್ತು ಭಾರತದ ದಿಗ್ಗಜ ವಿಶ್ವನಾಥನ್ ಆನಂದ್ ನಡುವಿನ ಪಂದ್ಯವಾಗಿತ್ತು. ಬಿಷಪ್-ಪಾನ್ ಎಂಡ್‌ಗೇಮ್‌ನಲ್ಲಿನ ತೀವ್ರ ಹೋರಾಟದಲ್ಲಿ ಆನಂದ್ ಸಮಯ ಮೀರಿದ ಕಾರಣ ಕಾರ್ಲ್‌ಸನ್ ಗೆಲುವು ಸಾಧಿಸಿದರು. ಆದರೆ ಕಾರ್ಲ್‌ಸನ್ ಅವರ ಗೆಲುವು ಪೈಪರ್ಸ್ ತಂಡವನ್ನು ಸೋಲಿನಿಂದ ಕಾಪಾಡಲಿಲ್ಲ. ಹಿಂದಿನ ಎರಡು ಪಂದ್ಯಗಳಲ್ಲಿ ಗೆದ್ದಿದ್ದ ವಿದಿತ್ ಗುಜರಾತಿ ಮತ್ತು ಕೋನೇರು ಹಂಪಿ, ಅಲಾಸ್ಕನ್ ನೈಟ್ಸ್ ವಿರುದ್ಧ ಸೋಲು ಅನುಭವಿಸಿದರು.
ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಿನೊ ಬಟ್ಸಿಯಾಶ್ವಿಲಿ, ಹಂಪಿ ಅವರನ್ನು 44ನೇ ನಡೆಗಳಲ್ಲಿ ಸೋಲಿಸಿ ನೈಟ್ಸ್ ತಂಡಕ್ಕೆ ಮುನ್ನಡೆ ಒದಗಿಸಿದರು. ಬಳಿಕ 15 ವರ್ಷದ ಯಾಗಿಜ್ ಕಾನ್ ಎರ್ಡೋಗ್ಮುಸ್ ಅವರ ಕೌಶಲ್ಯಯುತ ಆಟದಿಂದ ಒತ್ತಡಕ್ಕೆ ಸಿಲುಕಿದ ವಿದಿತ್ ಸಮಯ ಮೀರಿದ ಕಾರಣ ಸೋಲನುಭವಿಸಿದರು. ಇದರೊಂದಿಗೆ ಅಲಾಸ್ಕನ್ ನೈಟ್ಸ್ ತಂಡವು ಟೂರ್ನಿಯಲ್ಲಿತನ್ನ ಮೊದಲ ಗೆಲುವು ದಾಖಲಿಸಿತು.
ದಿನದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಬಳಿಕ ಕಪ್ಪು ಕಾಯಿಗಳಿಂದ ಆಡಲು ಗಂಗಾಸ್ ಗ್ರ್ಯಾಂಡ್ ಮಾಸ್ಟರ್ಸ್ ತಂಡ ತೆಗೆದುಕೊಂಡ ನಿರ್ಧಾರ ಹಿನ್ನಡೆಯಾಯಿತು. ಚೆಕ್ ಮುಂಬಾ ಮಾಸ್ಟರ್ಸ್ ಆರು ಪಂದ್ಯಗಳಲ್ಲಿಮೂರು ಗೆಲುವು ಮತ್ತು ಮೂರು ಡ್ರಾಗಳೊಂದಿಗೆ 12-3 ಅಂತರದ ಜಯ ದಾಖಲಿಸಿತು.
ಸ್ಟಾವ್ರೂಲಾ ತ್ಸೊಲಕಿಡೌ ವಿರುದ್ಧ ಗೆದ್ದು ಕರಿಸ್ಸಾ ಯಿಪ್, ಮುಂಬಾ ಮಾಸ್ಟರ್ಸ್ ತಂಡದ ಗೆಲುವಿಗೆ ಚಾಲನೆ ನೀಡಿದರು. ಬಳಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಎಂ. ಪ್ರಣೇಶ್, ಕೊನೆಯ ಕ್ಷ ಣದ ಸಮಯದ ಒತ್ತಡದಲ್ಲೂ ಧೈರ್ಯ ಕಳೆದುಕೊಳ್ಳದೆ ಅನುಭವಿ ಲೆವನ್ ಅರೋನಿಯನ್ ಅವರನ್ನು 65 ನಡೆಗಳ ಬಳಿಕ ಶರಣಾಗುವಂತೆ ಮಾಡಿದರು.
ಪ್ರಾಡಿಜಿ ಬೋರ್ಡ್‌ನಲ್ಲಿ ಲಿಯಾನ್ ಲ್ಯೂಕ್ ಮೆಂಡೋನ್ಸಾ ಸಮಯ ಮೀರಿದ ಕಾರಣ ಬರ್ಡಿಯಾ ದನೇಶ್ವರ್ ತಂಡಕ್ಕೆ ಮತ್ತೊಂದು ಮೂರು ಅಂಕಗಳನ್ನು ತಂದುಕೊಟ್ಟರು.