ಶಿವಮೊಗ್ಗ: ಶರಾವತಿ ನಗರದ 60 ಅಡಿ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ ರಸ್ತೆ ದಾಟುವಾಗ ವಾಹನ ಹರಿದು ಗಾಯಗೊಂಡಿದ್ದ ಮಣ್ಣುಮುಕ್ಕ ಹಾವನ್ನು ಸ್ನೇಕ್ ಕಿರಣ್ ರಕ್ಷಿಸಿದರು.
ಹಾವು ಗಾಯಗೊಂಡು ಒದ್ದಾಡುತ್ತಿದ್ದುದನ್ನು ಕಂಡು ಸ್ಥಳೀಯರು ಕಿರಣ್‌ಗೆ ಫೋನ್ ಮಾಡಿ ವಿಚಾರ ತಿಳಿಸಿದ್ದರು. ರಾತ್ರಿಯೇ ಸ್ಥಳಕ್ಕೆ ಬಂದ ಕಿರಣ್, ಹಾವಿಗೆ ಉಪಚರಿಸಿದರು. ರಾತ್ರಿಯೇ ಆಲ್ಕೋಳದಲ್ಲಿನ ಶಂಕರ ವಲಯದ ಅರಣ್ಯಾಧಿಕಾರಿಗಳ ಕಚೇರಿಗೆ ತೆರಳಿ ವಿಚಾರ ತಿಳಿಸಿದ್ದರು. ಮೇಲಾಧಿಕಾರಿಗಳ ಮನವಿ ಮೇರೆಗೆ ಬೆಳಗ್ಗೆ ಪುನಃ ಬಂದು ಅರಣ್ಯಾಧಿಕಾರಿಗಳ ಸಮ್ಮುಖದಲ್ಲೇ ಹಾವನ್ನು ಅರಣ್ಯದೊಳಗೆ ಬಿಟ್ಟು ಬಂದರು.
ಮಣ್ಣುಮುಕ್ಕ ಹಾವನ್ನು ಎರಡು ತಲೆ ಹಾವು ಅಂತಲೂ ಕರೆಯುತ್ತಾರೆ. ಆದರೆ ಇದಕ್ಕೆ ಒಂದೇ ತಲೆ ಇರುತ್ತದೆ. ಇದು ಮಣ್ಣಿನಲ್ಲಿಯೇ ವಾಸ ಮಾಡುತ್ತದೆ. ಅಂದಹಾಗೆ ಇದನ್ನು ಭಾರಿ ಬೆಲೆಗೆ ಕೊಂಡು ಮಾರಾಟ ಮಾಡುವ ಜಾಲವೇ ಇದೆ. ಇದು ವಿಷ ರಹಿತ ಹಾವಾಗಿದ್ದು ಯಾರಿಗೂ ತೊಂದರೆ ನೀಡುವುದಿಲ್ಲ. ಇದು ಕಚ್ಚುವುದಿಲ್ಲ. ಇದನ್ನು ಕಂಡು ಭಯಪಡುವ ಅವಶ್ಯಕತೆ ಇಲ್ಲ ಎಂದು ಸ್ನೇಕ್ ಕಿರಣ್ ಸಾರ್ವಜನಿಕರಿಗೆ ಮಾಹಿತಿ ನೀಡಿದರು.