ನವದೆಹಲಿ: ಸಲಿಂಗಿಗಳ ಮಧ್ಯೆ ನಡೆದ ವಿವಾಹದ ಹಿನ್ನೆಲೆಯಲ್ಲಿ ಇದೀಗ ಮದುವೆಗೆ ಕಾನೂನುಮಾನ್ಯತೆ ಕೋರಿ ಜೋಡಿಯೊಂದು ನ್ಯಾಯಾಲಯದ ಮೆಟ್ಟಿಲೇರಿದೆ. ಈ ಸಂಬಂಧ ದೆಹಲಿಯ ಹೈಕೋರ್ಟ್ಗೆ ಮನವಿಯೊಂದು ಸಲ್ಲಿಕೆ ಆಗಿದೆ.
ವಿದೇಶಿ ವಿವಾಹ ಕಾಯ್ದೆ 1969ರ ಅನ್ವಯ ಕಾನೂನು ಮಾನ್ಯತೆ ಒದಗಿಸುವಂತೆ ಕೋರಿ ನ್ಯಾಯಮೂರ್ತಿ ನವೀನ್ ಚಾವ್ಲಾ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಕೆ ಆಗಿದೆ. ಅವರು ಅದನ್ನು ದ್ವಿಸದಸ್ಯ ಪೀಠಕ್ಕೆ ರವಾನಿಸಿದ್ದಾರೆ. ಭಾರತೀಯ ಹಾಗೂ ಅನಿವಾಸಿ ಭಾರತೀಯ ಇಬ್ಬರೂ ಸಲಿಂಗಕಾಮಿಗಳಾಗಿದ್ದು 2017ರಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಮದುವೆ ಆಗಿದ್ದರು.
ಈ ಜೋಡಿ ಮಾರ್ಚ್ 5ರಂದು ನ್ಯೂಯಾರ್ಕ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ತೆರಳಿ ವಿದೇಶಿ ವಿವಾಹ ಕಾಯ್ದೆ ಅನ್ವಯ ಮದುವೆಗೆ ಕಾನೂನುಮಾನ್ಯತೆ ಒದಗಿಸುವಂತೆ ಕೋರಿತ್ತು. ಆದರೆ ಅವರು ಲೈಂಗಿಕ ವಿಷಯವನ್ನು ಉಲ್ಲೇಖಿಸಿ ಅದಕ್ಕೆ ನಿರಾಕರಿಸಿದ್ದರು.
ವಿವಾಹ ನೋಂದಣಿಗೆ ನಿರಾಕರಿಸುವುದು ಭಾರತದ ಸಂವಿಧಾನದ ಕಲಂ 14, 15, 19 ಮತ್ತು 21ರ ಉಲ್ಲಂಘನೆ. ಮಾತ್ರವಲ್ಲ ವಿದೇಶಿ ವಿವಾಹ ಕಾಯ್ದೆ ಸಲಿಂಗಿಗಳ ಮದುವೆಗೆ ಕಾನೂನುಮಾನ್ಯತೆ ಒದಗಿಸುವ ನಿಟ್ಟಿನಲ್ಲಿ ತಾರತಮ್ಯ ಎಸಗುತ್ತಿದೆ ಎಂಬುದಾಗಿ ಅವರು ಅರ್ಜಿದಾರರು ಹೇಳಿದ್ದಾರೆ.
ಮದುವೆಗೆ ಮಾನ್ಯತೆ ಸಿಗದಿದ್ದರೆ ಹಬ್ಬ-ಹರಿದಿನಗಳ ಸಂದರ್ಭದಲ್ಲಿ ತಾವು ದಂಪತಿಯಾಗಿ ಭಾರತಕ್ಕೆ ಬಂದು ತಮ್ಮ ಕುಟುಂಬಸ್ಥರ ಜತೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ ಎಂದು ಅವರು ಅರ್ಜಿಯಲ್ಲಿ ಕೇಳಿಕೊಂಡಿದ್ದಾರೆ. (ಏಜೆನ್ಸೀಸ್)