ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನಲ್ಲಿ ತಂಬಾಕು ಬೆಳೆಯುವ ಕಾರ್ಡುದಾರರ (ಹಂಗಾಮಿ ರೈತ) ತಂಬಾಕನ್ನು ಖರೀದಿ ಮಾಡಬೇಕೆಂದು ಪಶು ಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಕೇಂದ್ರ ಸರ್ಕಾರ ಹಾಗೂ ತಂಬಾಕು ಮಂಡಳಿಯನ್ನು ಒತ್ತಾಯಿಸಿದರು.
100 ಮಿಲಿಯನ್ ತಂಬಾಕು ಬೇಡಿಕೆ ಇದ್ದು, 80 ಮಿಲಿಯನ್ ತಂಬಾಕನ್ನು ಬೆಳೆಯಲಾಗಿದೆ. ಈಗಾಗಲೇ 60 ಮಿಲಿಯನ್ ರೈತರು ಮಾರಾಟ ಮಾಡಿದ್ದಾರೆ. ಆದರೆ, ಪ್ರತಿ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಕಾರ್ಡುದಾರರಿಗೆ ತಂಬಾಕು ಮಾರಾಟ ಮಾಡಲು ಅನುಮತಿ ನೀಡಲಾಗುತ್ತಿತ್ತು. ಆದರೆ ಈ ವರ್ಷ ಜನವರಿ ತಿಂಗಳು ಬಂದರು ಸಹ ಮಾರಾಟಕ್ಕೆ ಅನುಮತಿ ನೀಡಿಲ್ಲ ಎಂದು ಬೆಟ್ಟದಪುರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ತಾಲೂಕಿನ ಹಲವು ಕಾರ್ಡುದರರು ತಂಬಾಕು ಖರೀದಿ ಮಾಡಿ ನಮಗೆ ಲೈಸೆನ್ಸ್ ಮಾಡಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ. ನಮ್ಮ ಭಾಗದಲ್ಲಿ ಬೆಳೆಯುವ ತಂಬಾಕು ಗುಣಮಟ್ಟದ್ದಾಗಿದ್ದು, ಕಾರ್ಡುದಾರರಿಗೆ ಶುಲ್ಕ ರಹಿತ ತಂಬಾಕು ಖರೀದಿಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ರಾಗಿ ಖರೀದಿ ಕೇಂದ್ರದಲ್ಲಿ ಸರ್ಕಾರದ ನಿಯಮದ ಪ್ರಕಾರ ಖರೀದಿ ಮಾಡಬೇಕು. ಸಣ್ಣ ಮತ್ತು ದೊಡ್ಡ ರೈತ ಎಂದು ವಿಭಾಗ ಮಾಡದೆ ಎಲ್ಲರಿಗೂ ರಾಗಿ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ರೈತರು ಗುಣಮಟ್ಟದ ರಾಗಿಯನ್ನು ತಂದು ಮಾರಾಟ ಮಾಡಬೇಕು ಎಂದು ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಹಮತ್ ಜಾನ್ ಬಾಬು, ಡಿ.ಟಿ ಸ್ವಾಮಿ, ವಕೀಲ ಬಿ.ವಿ.ಜವರೇಗೌಡ, ಪರಮೇಶ್ ಇದ್ದರು.