ತಿ.ನರಸೀಪುರ: ಸಹಕಾರ ಸಂಘದ ಆದಾಯ ಕ್ರೋಡೀಕರಣಕ್ಕಾಗಿ ಪೆಟ್ರೋಲ್ ಬಂಕ್, ಮೆಡಿಕಲ್ ಸ್ಟೋರ್ ಹಾಗೂ ಎಲ್‌ಪಿಜಿ ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಸೋಸಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಪರಶಿವಮೂರ್ತಿ ಹೇಳಿದರು.
ತಾಲೂಕಿನ ಸೋಸಲೆ ಗ್ರಾಮದ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ 2022-23ನೇ ಸಾಲಿನ ಸಂಘದ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಸಂಘವು ಸದಸ್ಯರ ಸಹಕಾರದಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉತ್ತಮ ಲಾಭಾಂಶಗಳಿಸಿದೆ. ಮತ್ತಷ್ಟು ಆರ್ಥಿಕ ಪ್ರಗತಿ ಸಾಧಿಸಲು ಸರ್ಕಾರ ಸಹಕಾರ ಸಂಘಗಳ ವ್ಯಾಪ್ತಿಗೆ ಪೆಟ್ರೋಲ್ ಬಂಕ್, ಎಲ್ಪಿಜಿ ಘಟಕ ಹಾಗೂ ಮೆಡಿಕಲ್ ಸ್ಟೋರ್‌ಗಳನ್ನು ತೆರೆಯಲು ಅನುದಾನ ನೀಡಲಿದೆ. ಈ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿದೆ ಎಂದರು.
ಸದಸ್ಯರೊಬ್ಬರ ಆರೋಪದಂತೆ ಸಂಘದ ಹಣ ದುರ್ಬಳಕೆಯಾಗಿಲ್ಲ. ಬೆನಕನಹಳ್ಳಿ ವ್ಯಾಪ್ತಿಯ ಷೇರುದಾರರೇ ಸಂಘದಲ್ಲಿ ಹೆಚ್ಚಿರುವುದರಿಂದ ಪ್ರತ್ಯೇಕ ಮಾಡಿದರೆ ಸಂಘವು ಆರ್ಥಿಕವಾಗಿ ಸಂಕಷ್ಟ ಎದುರಿಸಬೇಕಾಗುವುದನ್ನು ಮನಗಂಡು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ವಕೀಲರಿಗೆ 1 ಲಕ್ಷ ರೂ. ಶುಲ್ಕ ನೀಡಲಾಗಿದೆ ಹೊರತು ದುರುಪಯೋಗವಾಗಿಲ್ಲ ಎಂದರು.
ಈ ವೇಳೆ ಶಿವಕುಮಾರ್ ಎಂಬುವರು, ವಕೀಲರಿಗೆ 1 ಲಕ್ಷ ರೂ. ಶುಲ್ಕವನ್ನು ನೀಡುವ ಮೂಲಕ ಅನವಶ್ಯಕವಾಗಿ ಹಣ ಪೋಲು ಮಾಡಲಾಗಿದೆ ಎಂದು ಆರೋಪಿಸಿದರು. ವಿಷಯಕ್ಕೆ ಸಂಬಂಧಿಸಿದಂತೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಅಧ್ಯಕ್ಷರು ಶಿವಕುಮಾರ್ ಆರೋಪಕ್ಕೆ ಸ್ಪಷ್ಟನೆ ನೀಡಿದರು.
ಸಂಘದ ಉಪಾಧ್ಯಕ್ಷ ಎಂ.ಸೋಮಣ್ಣ, ನಿರ್ದೇಶಕರಾದ ಬಿ.ಎನ್.ಪ್ರಭುಸ್ವಾಮಿ, ಎಸ್.ಎನ್.ಧರ್ಮರತ್ನಾಕರ ಕುಮಾರ್, ಬಿ.ಎಸ್.ಬಸಪ್ಪ, ಸೈಯದ್ ಮುಸ್ತಾಕ್, ಎಸ್.ಕುಮಾರ್, ಎಂ.ನಾಗರಾಜು, ಹೊನ್ನನಾಯಕ, ಜಯಮ್ಮ, ನೀಲಮ್ಮ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಜಗದೀಶ್, ಸಹಾಯಕ ಎಸ್.ಸಿದ್ದಮಲ್ಲಯ್ಯ, ಶಿವಕುಮಾರ್, ಆಶಾ ಹಾಜರಿದ್ದರು.