ನ್ಯೂಸ್

'ಚಿಕ್ಕೆಜಮಾನ್ರು' ಸಿನಿಮಾ ನಟಿ ಗೌತಮಿಗೆ ಕೊಲೆ ಬೆದರಿಕೆ!

ಚೆನ್ನೈ​:  ನನ್ನ ಹಾಗೂ ನನ್ನ ಮಗಳು ಶುಭಲಕ್ಷ್ಮಿಗೆ ಕೊಲೆ ಬೆದರಿಕೆ ಇದೆ ಎಂದು ಬಹುಭಾಷಾ ನಟಿ ಗೌತಮಿ ಚೆನ್ನೈ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ.

ದೂರಿನ ಪ್ರಕಾರ,  ಮಗಳ ವಿದ್ಯಾಭ್ಯಾಸ ಮತ್ತಿತರ ಉದ್ದೇಶಗಳಿಗಾಗಿ 46 ಎಕರೆ ಜಮೀನನ್ನು ಮಾರಾಟ ಮಾಡಲು ಗೌತಮಿ ಮುಂದಾಗಿದ್ದರು. ಬಿಲ್ಡರ್ ಅಳಗಪ್ಪನ್ ಮತ್ತು ಅವರ ಪತ್ನಿ ನಟಿಯ ಬಳಿ ಇದ್ದ ಕೆಲ ವಸ್ತುಗಳನ್ನು ಮಾರಾಟ ಮಾಡುವ ನೆಪದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೇ ನಟಿ ಮತ್ತು ಅವರ ಮಗಳಿಗೆ ಜೀವ ಬೆದರಿಕೆ ಇದೆ. ಕೊಲೆ ಬೆದರಿಕೆ ಜೊತೆಗೆ 25 ಕೋಟಿ ಮೌಲ್ಯದ ಆಸ್ತಿ ಕಳ್ಳತನವಾಗಿದೆ ಎಂದು ನಟಿ ಗೌತಮಿ ಚೆನ್ನೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಆಸ್ತಿ ಮಾರಾಟ ಮಾಡಲು ಸಹಾಯ ಮಾಡಲು ಬಂದ ಬಿಲ್ಡರ್ ಅಳಗಪ್ಪನ್ ಮತ್ತು ಅವರ ಪತ್ನಿ ತಮಗೆ ಮೋಸ ಮಾಡಿದ್ದಾರೆ. ನನ್ನ ಸಹಿ ಹಾಕಿ ನಕಲಿ ದಾಖಲೆ ಸೃಷ್ಟಿಸಿ 25 ಕೋಟಿ ರೂ. ಮೌಲ್ಯದ ಆಸ್ತಿ ಕದ್ದಿದ್ದಾರೆ. ವಂಚನೆಯ ಬಗ್ಗೆ ನಟಿ ಗೌತಮಿ ಕೇಳಿದ ವೇಳೆ ಅಳಗಪ್ಪನ್ ರಾಜಕೀಯ ಗೂಂಡಾಗಳ ಸಹಾಯದಿಂದ ನಿನ್ನ ಹಾಗೂ ನಿನ್ನ ಮಗಳನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾರಂತೆ ಎಂದು ಗೌತಮಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ, ಇದೀಗ ತನಿಖೆ ನಡೆಸುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಬಿಲ್ಡರ್‌ಗೆ ನೋಟಿಸ್ ಕೂಡ ಕಳುಹಿಸಿದ್ದಾರೆ.

54 ವರ್ಷದ ಹಿರಿಯ ನಟಿ ಗೌತಮಿ ತಮಿಳು, ತೆಲುಗು, ಕನ್ನಡ ಸೇರಿದಂತೆ ಅನೇಕ ಭಾಷೆಗಳಲ್ಲಿ ಸ್ಟಾರ್ ನಟರ ಜೊತೆ ನಟಿಸಿ ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ. ಕನ್ನಡದಲ್ಲಿ ಕೇಜ್ರಿಸ್ಟಾರ್ ರವಿಚಂದ್ರನ್ ಜೊತೆ ನಟಿ ಗೌತಮಿ ಚಿಕ್ಕೆಜಮಾನ್ರು ಸಿನಿಮಾ ಮಾಡಿದ್ದಾರೆ. ನಟ ಕಮಲ್ ಹಾಸನ್‌ ಜೊತೆ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿದ್ದರು. 2004 ರಿಂದ 2016ರವರೆಗೂ ಇಬ್ಬರೂ ಜೊತೆಯಾಗಿಯೇ ಇದ್ದರು. ಬಳಿಕ ಗೌತಮಿ ಸುಧೀರ್ಘ ಪತ್ರ ಬರೆದು ಬೇರೆಯಾಗುತ್ತಿರುವುದಾಗಿ ಹೇಳಿದ್ದರು.