ನವದೆಹಲಿ: ಹುರನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಉದ್ಯಮಿ ಗೌತಮ್ ಅದಾನಿ ಅವರು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಶ್ರೀಮಂತ ಭಾರತೀಯ ಎನಿಸಿಕೊಂಡಿದ್ದಾರೆ.
11.2 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಉದ್ಯಮಿ ಗೌತಮ್ ಅದಾನಿ ಹಾಗೂ ಹುರುನ್ ಇಂಡಿಯಾ 2024 ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯವರನ್ನು ಹಿಂದಿಕ್ಕುವ ಮೂಲಕ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವರ್ಷದ ಜುಲೈ 31 ರವರೆಗಿನ ಉದ್ಯಮಿಗಳ ಸಂಪತ್ತಿನ ಲೆಕ್ಕಾಚಾರವನ್ನು ಆಧರಿಸಿ 10.14 ಲಕ್ಷ ಕೋಟಿ ರೂ. ಸಂಪತ್ತನ್ನು ಹೊಂದಿರುವ ಮುಕೇಶ್ ಅಂಬಾನಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಇತರ ಪ್ರಮುಖ ಬಿಲಿಯನೇರ್‌ಗಳಾದ ಎಚ್‌ಸಿಎಲ್ ಟೆಕ್ನಾಲಜೀಸ್‌ನ ಶಿವ ನಾಡಾರ್ ಅವರು 3.14 ಲಕ್ಷ ಕೋಟಿ ರೂ.ಗಳೊಂದಿಗೆ ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸೈರಸ್ ಎಸ್. ಪೂನಾವಲ್ಲ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹಾಗೂ 2.49 ಲಕ್ಷ ಕೋಟಿ ರೂ. ಸಂಪತ್ತು ಹೊಂದಿರುವ ಸನ್ ಫಾರ್ಮಾಸ್ಯುಟಿಕಲ್ ಇಂಡಸ್ಟ್ರೀಸ್‌ನ ದಿಲೀಪ್ ಶಾಂಘ್ವಿ ಪಡೆದುಕೊಂಡಿದ್ದಾರೆ.
ದೇಶವು ಏಷ್ಯಾದ ಸಂಪತ್ತನ್ನು ಸೃಷ್ಟಿಸುವ ಒಂದು ಎಂಜಿನ್ ಆಗಿ ಹೊರಹೊಮ್ಮುತ್ತಿದೆ. ಜೊತೆಗೆ ಚೀನಾ ಶೇ.25 ರಷ್ಟು ಕುಸಿತ ಕಂಡಾಗಲೂ ಭಾರತ ಶೇ.29 ರಷ್ಟು ಏರಿಕೆಯನ್ನು ಕಂಡಿದೆ ಎಂದು ಹುರುನ್ ಸಂಸ್ಥಾಪಕ ಹಾಗೂ ಮುಖ್ಯ ಸಂಶೋಧಕ ಅನಸ್ ರೆಹಮಾನ್ ತಿಳಿಸಿದ್ದಾರೆ.
ದೇಶಾದ್ಯಂತ ಬಿಲಿಯನೇರ್ (ನೂರು ಕೋಟಿ) ಸಂಖ್ಯೆ ಹೆಚ್ಚಾಗಿದ್ದು, 334ಕ್ಕೆ ತಲುಪಿ ದಾಖಲೆ ನಿರ್ಮಿಸಿದೆ ಎಂದು ವರದಿಯೊಂದು ತಿಳಿಸಿದೆ. ಜೊತೆಗೆ ಕಳೆದ ವರ್ಷ ಭಾರತವು ಪ್ರತಿ ಐದು ದಿನಗಳಿಗೆ ಒಬ್ಬ ಬಿಲಿಯನೇರ್‌ನ್ನು ಉತ್ಪಾದಿಸುವ ಮೂಲಕ 259 ಬಿಲಿಯನೇರ್‌ಗಳನ್ನು ಹೊಂದಿತ್ತು ಎಂದು ತಿಳಿಸಿದೆ.
ಏಳು ವರ್ಷ ಹಿಂದಿನ ಬೆಳವಣಿಗೆಯನ್ನು ತುಲನೆ ಮಾಡಿದಾಗ ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯು ಶೇ.1520ರಷ್ಟು ಗಣನೀಯವಾಗಿ ವಿಸ್ತರಿಸಿದೆ. 1500 ವ್ಯಕ್ತಿಗಳು 1 ಸಾವಿರ ಕೋಟಿ ರೂ.ಗಿಂತಲೂ ಹೆಚ್ಚಿನ ಸಂಪತ್ತಿನ ಮೌಲ್ಯ ಹೊಂದಿದ್ದಾರೆ ಎಂದು ವರದಿಯೊಂದು ತಿಳಿದು ಬಂದಿದೆ.