ನ್ಯೂಸ್

ಗೌರಿ ಹತ್ಯೆ ಆರೋಪಿ ರಿಷಿಕೇಶ್ ಎಸ್​ಐಟಿ ವಶಕ್ಕೆ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಇತ್ತೀಚೆಗೆ ಎಸ್​ಐಟಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಆರೋಪಿ ರಿಷಿಕೇಶ್​ನನ್ನು ನ್ಯಾಯಾಲಯ 15 ದಿನ ಎಸ್​ಐಟಿ ವಶಕ್ಕೆ ಒಪ್ಪಿಸಿದೆ.

ಪ್ರಕರಣದ 18ನೇ ಆರೋಪಿ ರಿಷಿಕೇಶ್​ನನ್ನು ಸೋಮವಾರ ಬೆಳಗ್ಗೆ ಸಿಟಿ ಸಿವಿಲ್ ಕೋರ್ಟ್​ಗೆ ಎಸ್​ಐಟಿ ತಂಡ ಹಾಜರು ಪಡಿಸಿತ್ತು. ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಸಲು 30 ದಿನಗಳ ಕಾಲ ವಶಕ್ಕೆ ನೀಡುವಂತೆ ಎಸ್​ಐಟಿ ಪೊಲೀಸರು ಮಾಡಿದ ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರೋಪಿಯನ್ನು 15 ದಿನ ಎಸ್​ಐಟಿ ವಶಕ್ಕೆ ಒಪ್ಪಿಸಿದೆ. ಗೌರಿ ಲಂಕೇಶ್ ಹತ್ಯೆ ನಡೆದ ಎರಡೂವರೆ ವರ್ಷದ ಬಳಿಕ ಜಾರ್ಖಂಡ್​ನಲ್ಲಿ ರಿಷಿಕೇಶ್​ನನ್ನು ಸೆರೆಹಿಡಿಯಲಾಗಿತ್ತು. ಬಂಧಿತ ಆರೋಪಿ ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್​ಗಳನ್ನು ನಾಶ ಮಾಡಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಎಸ್​ಐಟಿ ಈತನನ್ನು ಬಂಧಿಸಿದೆ ಎನ್ನಲಾಗಿದೆ.