ನ್ಯೂಸ್

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬಂದ ಗೌರಿ ಗಣಪ

ಚಿಕ್ಕಬಳ್ಳಾಪುರ: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಗೌರಿ ಗಣಪನ ಮೂರ್ತಿಗಳು ಮಾರುಕಟ್ಟೆಗೆ ಬರುತ್ತಿದ್ದು ಜಿಲ್ಲೆಯ ಮೂರ್ತಿ ತಯಾರಕರು, ವ್ಯಾಪಾರಸ್ಥರು ಒಳ್ಳೆಯ ವಹಿವಾಟಿನಿಂದ ಹೆಚ್ಚಿನ ಆದಾಯ ನಿರೀಕ್ಷೆಯಲ್ಲಿದ್ದಾರೆ. 
ಜಿಲ್ಲಾ ಕೇಂದ್ರದ ಬಿ.ಬಿ.ರಸ್ತೆಯಲ್ಲಿನ ಬೆಸ್ಕಾಂ ಕಚೇರಿ, ಜೂನಿಯರ್ ಕಾಲೇಜು ಮುಂಭಾಗ, ಬಜಾರ್ ರಸ್ತೆ ಮತ್ತು ಭುವನೇಶ್ವರಿ ವೃತ್ತದ ರಸ್ತೆಯಲ್ಲಿ ಒಂದು ಅಡಿ ಎತ್ತರದಿಂದ 20 ಅಡಿ ಎತ್ತರದ ವಿವಿಧ ಬಗೆಯ ಆಕರ್ಷಕ ಮೂರ್ತಿಗಳನ್ನು ಮಾರಾಟಕ್ಕಿಡಲಾಗುತ್ತಿದೆ. ಹಬ್ಬ ಸಮೀಪಿಸುತ್ತಿದ್ದಂತೆ ಸಾರ್ವಜನಿಕ ಗಣಪತಿ ಪ್ರತಿಷ್ಠಾಪನಾ ಸಮಿತಿ, ಗೆಳೆಯರ ಬಳಗ, ಸಂಘ ಸಂಸ್ಥೆಗಳು ಆಕರ್ಷಕ ಮೂರ್ತಿಗಳ ಖರೀದಿಗೆ ಮುಂಗಡ ಹಣ ಪಾವತಿಸಿ, ಬುಕ್ ಮಾಡಿಕೊಳ್ಳಲು ಮುಂದಾಗಿವೆ. ಮುಂಬರುವ ದಿನಗಳಲ್ಲಿ ವಹಿವಾಟು ಜೋರಾಗುವ ಮಾತುಗಳು ಕೇಳಿ ಬರುತ್ತಿವೆ.
ಕನಿಷ್ಠ 150 ರಿಂದ 90 ಸಾವಿರ ರೂ ಮೌಲ್ಯದ ಗಣಪನ ಮೂರ್ತಿಗಳನ್ನು ಮಾರಾಟಕ್ಕಿಡಲಾಗುತ್ತಿದೆ.   ಇನ್ನೂ ಹೆಚ್ಚಿನ ಬೆಲೆಯ ಮೂರ್ತಿಗಳನ್ನು ಆಪೇಕ್ಷಿಸಿದ್ದಲ್ಲಿ ತಂದು ಕೊಡಲಾಗುತ್ತದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.


*ಈ ಬಾರಿಯೂ ದಾನಿಗಳ ನಿರೀಕ್ಷೆ*
ಹಿಂದೆ ಪ್ರತಿ ವರ್ಷ ಜಿಲ್ಲಾದ್ಯಂತ ಶಾಸಕರು, ಸಮಾಜ ಸೇವಕರು ಸಾರ್ವಜನಿಕ ಗಣಪತಿ ಪ್ರತಿಷ್ಠಾಪನಾ ಸಮಿತಿಗಳಿಗೆ ಉಚಿತವಾಗಿ ಮೂರ್ತಿಗಳನ್ನು ವಿತರಿಸುತ್ತಿದ್ದರು. ಇದರಿಂದ ಈ ಬಾರಿಯೂ ದಾನ ಪಡೆಯುವ ನಿರೀಕ್ಷೆಯಲ್ಲಿ ಗಣಪತಿ ಪ್ರತಿಷ್ಠಾಪನಾ ಸಮಿತಿ ಮತ್ತು ಸಂಘ ಸಂಸ್ಥೆಗಳು ಇವೆ.
ಮತ್ತೊಂದೆಡೆ ದಾನಿಗಳ ಕಾಟವು ವ್ಯಾಪಾರಿಗಳಲ್ಲಿ ವಹಿವಾಟು ಕುಸಿತದ ಆತಂಕವನ್ನು ಉಂಟು ಮಾಡುತ್ತಿದೆ. ಇದರ ನಡುವೆಯೂ ಮೂರ್ತಿಗಳ ಖರೀದಿಗೆ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ ಎಂಬ ವಿಶ್ವಾಸವನ್ನು ಹೊಂದಲಾಗಿದೆ.


*ಸರ್ಕಾರದ ನಿಷೇಧ ಆದೇಶ*
ಮಾರಕ ಮೂರ್ತಿಗಳಿಗೆ ಬ್ರೇಕ್
ಪರಿಸರ ಮಾಲಿನ್ಯಕ್ಕೆ ಕಾರಣವಾಗಲಿರುವ ಪ್ಲಾಸ್ಟರ್ ಆ್ ಪ್ಯಾರಿಸ್ ಗಣೇಶ ವಿಗ್ರಹಗಳ ಮಾರಾಟ ಮತ್ತು ಪ್ರತಿಷ್ಠಾಪನೆಯನ್ನು ನಿಷೇಧಿಸಲಾಗಿದೆ.
ಜಲ ಮಾಲಿನ್ಯ ತಡೆ ಕಾಯ್ದೆ 1974ರ ಪ್ರಕಾರ ಪ್ಲಾಸ್ಟರ್ ಆಫ್ ಪ್ಯಾರಿಸ್, ಬಣ್ಣ ಲೇಪಿತ ವಿಗ್ರಹಗಳನ್ನು ಜಲ ಮೂಲಗಳಾದ ಕೆರೆ, ಕುಂಟೆ, ಕಾಲುವೆ, ಬಾವಿಗಳಲ್ಲಿ ವಿಸರ್ಜಿಸುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಅಧಿಕಾರಿಗಳ ಎಚ್ಚರಿಕೆ ಹಿನ್ನೆಲೆಯಲ್ಲಿ ಎಲ್ಲೂ ಪಿಒಪಿ ಮೂರ್ತಿಗಳು ಕಾಣಿಸುತ್ತಿಲ್ಲ.

*ಅಗಲಗುರ್ಕಿ ಬಳಿ ನಿರ್ಮಾಣ*
ಚಿಕ್ಕಬಳ್ಳಾಪುರ ನಗರದ ಅಗಲಗುರ್ಕಿ ಗೇಟ್ ಬಳಿ ಪಶ್ಚಿಮ ಬಂಗಾಲದ ಕಾರ್ಮಿಕರು ಗಣಪನ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ‌.
ಕಳೆದ 20 ದಿನಗಳಿಂದಲೂ ಟೆಂಟ್ ಹಾಕಿಕೊಂಡು ನವಿಲು ಗಣಪ, ವೀಣೆ ಗಣಪ, ಬಸವ ಗಣಪ ಸೇರಿದಂತೆ ವಿವಿಧ ಬಗೆಯ ಮೂರ್ತಿಗಳನ್ನು ನಿರ್ಮಿಸಿದ್ದು ಆಕರ್ಷಕ ಅಲಂಕಾರದ ಅಂತಿಮ ಸ್ಪರ್ಶ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಇದರ ನಡುವೆ ಅನೇಕರು ಬಯಸಿದ ವಿನ್ಯಾಸದ ಮೂರ್ತಿಗಳಿಗೆ ಬುಕ್ಕಿಂಗ್ ಮಾಡಿದ್ದಾರೆ.