ಬೆಂಗಳೂರು: ಸಮಾಜದಲ್ಲಿ ಎಲ್ಲಾ ವರ್ಗದವರಿಗೂ ಸಮನಾವಕಾಶ ಸಿಗಬೇಕೆಂಬ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶಕ್ಕೆ ಸಂವಿಧಾನ ನೀಡುವುದರೊಂದಿಗೆ, ಪ್ರಬುದ್ಧ ಚಿಂತರಾಗಿಯೂ ಸುಧಾರಣೆಗೆ ಪ್ರಯತ್ನಿಸಿದ್ದರು. ಅವರ ಚಿಂತನೆಯೊಂದಿಗೆ ದೇಶ ಮುನ್ನಡೆಯಬೇಕಿದೆ ಎಂದು ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ ಹೇಳಿದ್ದಾರೆ.
ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಹಾಗೂ ನಿಗಮದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರ ಸಂದ ಸಹಯೋಗದೊಂದಿಗೆ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಮಳೆ ಕೊರತೆ ನಡುವೆಯೂ ಕೆಪಿಸಿಎಲ್ ಈ ಬಾರಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಮೂಲಕ ವಿದ್ಯುತ್ ಸಮಸ್ಯೆ ಕಾಡದಂತೆ ನೋಡಿಕೊಂಡಿದೆ. ಮುಂದಿನ ದಿನಗಳಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ವಿದ್ಯುತ್ ಉತ್ಪಾದಿಸಿ ನಿಗಮವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದ್ದು, ಅದಕ್ಕಾಗಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಚಿಂತಕಿ ಡಾ. ಎಚ್.ಎಸ್.ಅನುಪಮ, ಹಂಪಿ ವಿವಿ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಚಿನ್ನಸ್ವಾಮಿ ಸೋಸಲೆ ಅಂಬೇಡ್ಕರ್ ಅವರ ಜೀವನ, ಸಾಧನೆಗಳ ಕುರಿತು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವೀತಿಯ ಪಿಯುಸಿ ಪರೀೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿದ ಕೆಪಿಸಿಎಲ್ ಸಿಬ್ಬಂದಿ ಮಕ್ಕಳಿಗೆ ಮೂರು ಗ್ರಾಂನ ಚಿನ್ನದ ಪದಕ ನೀಡಿ ಪುರಸ್ಕರಿಸಲಾಯಿತು.
ಕೆಪಿಸಿಎಲ್ ಮಾನವ ಸಂಪನ್ಮೂಲ ನಿರ್ದೇಶಕ ಸಿ.ನಾಗರಾಜ, ಹಣಕಾಸು ನಿರ್ದೇಶಕ ಆರ್.ನಾಗರಾಜ, ತಾಂತ್ರಿಕ ನಿರ್ದೇಶಕ ಸಿ.ಎಂ.ದಿವಾಕರ್, ಆಡಳಿತ ಮತ್ತು ಮಾನವ ಸಂಪನ್ಮೂಲ ಪ್ರಧಾನ ಪ್ರಬಂಧಕ ಚಂದ್ರಶೇಖರ್ ಇನ್ನಿತರರಿದ್ದರು.