ಶಿವಮೊಗ್ಗ: ಈ ಬಾರಿ ಮುಂಗಾರು ಆಶಾದಾಯಕವಾಗಿದೆ. ಆರಂಭದಲ್ಲೇ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದುಬರುತ್ತಿದೆ. ಜಲಾಶಯ ಭರ್ತಿಯಾಗುವ ನಿರೀಕ್ಷೆ ಹೆಚ್ಚಿದೆ. ಹೀಗಾಗಿ ಮುಂಗಾರು ಹಂಗಾಮಿನಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಭದ್ರಾ ಅಚ್ಚುಕಟ್ಟು ಪ್ರದೇಶದ ಎಡದಂಡೆ ನಾಲೆ ಅಚ್ಚುಕಟ್ಟು ರೈತರಿಗೆ ಈಗ ಆಘಾತ ಉಂಟಾಗಿದೆ.
ಭದ್ರಾ ಜಲಾಶಯದ ಎಡದಂಡೆ ನಾಲೆಗೆ ಹೊಸ ಗೇಟ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣವಾಗಲು ಇನ್ನೂ ಒಂದೂವರೆ ತಿಂಗಳು ಬೇಕಾಗುತ್ತದೆ. ಹೀಗಾಗಿ ಮುಂಗಾರು ಹಂಗಾಮಿಗೆ ಭದ್ರಾ ಎಡದಂಡೆ ನಾಲೆಯಲ್ಲಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಎಡದಂಡೆ ನಾಲೆಯು 77 ಕಿ.ಮೀ ಉದ್ದವಿದ್ದು, 8,300 ಹೆಕ್ಟೇರ್ ಕೃಷಿ ಜಮೀನಿಗೆ ನೀರು ಪೂರೈಸುತ್ತದೆ.
ಭದ್ರಾ ಜಲಾಶಯದ ಎಡದಂಡೆ ನಾಲೆಯ ಅಚ್ಚುಕಟ್ಟುದಾರರು ನೀರನ್ನು ಅವಲಂಬಿಸಿ ಭತ್ತ ಅಥವಾ ಹೆಚ್ಚು ನೀರು ಬಯಸುವ ಬೆಳೆಗಳನ್ನು ಬೆಳೆಯಬಾರದು. ಒಂದು ವೇಳೆ ಬೆಳೆಗಳನ್ನು ಬೆಳೆದು ನಾಲೆಯಿಂದ ನೀರು ಸಿಗದೆ ಬೆಳೆ ನಷ್ಟವಾದಲ್ಲಿ ನೀರಾವರಿ ಇಲಾಖೆ ಯಾವುದೇ ರೀತಿ ಹೊಣೆ ಹೊರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.