ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಗ್ಯಾಸ್ ಸಿಲಿಂಡರಿ ಡೆಲಿವರಿ ವೇಳೆ ಬ್ಲಾಸ್ಟ್.
ಸೋರಿಕೆಯಾಗಿದ್ದ ಸಿಲಿಂಡರ್, ಬಾಗಿಲ ಬಳಿ ಉರಿಯುತ್ತಿದ್ದ ದೀಪಕ್ಕೆ ರಿಯಾಕ್ಟ್.
ಏಜೆಂಟ್ ಕಾರ್ಯದ ವಿರುದ್ಧ ನೆಟ್ಟಿಗರಿಂದ ಕಿಡಿ..ಇದೇನಾ ತರಬೇತಿ ಕೊಡೋದು ಎಂದು ತರಾಟೆ
ಬೆಂಗಳೂರು: ಮನೆಯ ಆವರಣದ ಬಳಿ ಇಂಡಿಯನ್ ಗ್ಯಾಸ್ ಏಜೆಂಟ್ ಸಿಲಿಂಡರ್ ತಂದಿಡುತ್ತಿದ್ದಂತೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ಮಲ್ಲೇಶ್ವರಂನಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಏಜೆಂಟ್ ನಡೆ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ದೀಪ ಇರುವ ಕಡೆ ಗ್ಯಾಸ್ ಇಟ್ಟಿದ್ದು ಏಜೆಂಟ್ ತಪ್ಪು ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಪ್ರಕಾರ, ಮಲ್ಲೇಶ್ವರಂ ಪೊಲೀಸ್ ಠಾಣಾ ವ್ಯಾಪ್ತಿ.. ಕುಟುಂಬಸ್ಥರೊಬ್ಬರು ಸಿಲಿಂಡರ್ ಆರ್ಡರ್ ಮಾಡಿದ್ದಾರೆ. ಸಿಲಿಂಡರ್ ತಂದಿಡುವ ದಿನ ಮನೆಯನ್ನು ಗೃಹಿಣಿ ಅಲಂಕರಿಸಿದ್ದರು. ರಂಗೋಲಿ ಹಚ್ಚಿ ಬಾಗಿಲ ಬಳಿ ದೀಪ ಅಂಟಿಸಿದ್ದರು. ಇದೇ ವೇಳೆ ಬಂದ ಇಂಡಿಯನ್ ಗ್ಯಾಸ್ ಏಜೆಂಟ್ ಗ್ಯಾಸ್ ಇಳಿಸಿದ್ದಾರೆ. ತಕ್ಷಣವೇ ಅದು ದೀಪದ ಬೆಂಕಿಗೆ ಹೊತ್ತುಕೊಂಡಿದೆ. ಏಜೆಂಟ್ ಅದನ್ನು ಯಾರೂ ಇಲ್ಲದ ಸ್ಥಳಕ್ಕೆ ಬಿಸಾಡಿ...ಪ್ರಾಣ ಉಳಿಸಿಕೊಂಡಿದ್ದಾರೆ. ನಂತರ ಇಬ್ಬರು ಸೇರಿ ನೀರನ್ನು ಹಾಕಿ, ಪರಿಸ್ಥಿತಿ ತಹಬದಿಗೆ ತಂದಿರುವುದು ವಿಡಿಯೋದಲ್ಲಿ ಇದೆ.
ಸಿಲಿಂಡರ್ಗೆ ಬೆಂಕಿ ಹತ್ತಿಕೊಂಡ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಲೇ, ಮಲ್ಲೇಶ್ವರಂ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದರು. ಅದೃಷ್ಟವಶಾತ್ ಸಾರ್ವಜನಿಕರ ಜೀವಕ್ಕೂ ಅಪಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಸಿಲಿಂಡರ್ನಲ್ಲಿ ಸಣ್ಣ ಪ್ರಮಾಣದ ಗ್ಯಾಸ್ ಲೀಕೆಜ್ ಆಗಿದೆ. ಹೀಗಾಗಿ ಸಿಲಿಂಡರ್ ಕೆಳಕ್ಕೆ ಇಡುತ್ತಲೇ ಹತ್ತಿರದಲ್ಲೇ ಇದ್ದ ದೀಪದ ಗಾಳಿಗೆ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡಿದೆ ಎನ್ನಲಾಗಿದೆ.
ಈ ಡೆಲಿವರಿ ಬಾಯ್ ಎಷ್ಟು ಮೂರ್ಖ. ಬಾಗಿಲ ಮುಂದೆಯೇ ದೀಪ ಉರಿಯುತ್ತಿದೆ. ಆದರೂ ಇವನು ಸಿಲಿಂಡರ್ ಕ್ಲಿಪ್ ತೆಗೆದಿದ್ದಾನೆ. ಅಷ್ಟೇ ಅಲ್ಲ, ಬೆಂಕಿಯನ್ನು ಹೇಗೆ ನಂದಿಸಬೇಕು ಎಂಬ ಅರಿವೂ ಇವನಿಗಿಲ್ಲ ಎಂದು ಕಿಡಿಕಾರಿದ್ದಾರೆ. ಗಣೇಶ್ ಆರ್ ಎಂಬುವವರು ಕಾಮೆಂಟ್ ಮಾಡಿದ್ದು, ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತುಕೊಂಡ ಬಗ್ಗೆ ಅಲ್ಲ, ಆ ಡೆಲಿವರಿ ಏಜೆಂಟ್ ಸಿಲಿಂಡರ್ ಅನ್ನು ತಂದಿಳಿಸಿದ ಬಗ್ಗೆ ಮತ್ತು ಸಿಲಿಂಡರ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡ ನಂತರ ಆತ ವರ್ತಿಸಿದ ಬಗ್ಗೆ ನಾಚಿಕೆಯಾಗಬೇಕು. ನಿಮಗೆ ತರಬೇತಿ ನೀಡಲು ಇಡುವ ಹಣ ಎಲ್ಲಿಗೆ ಹೋಗುತ್ತಿವೆ? ಎಂದು ಗುಡುಗಿದ್ದಾರೆ, (ಏಜೆನ್ಸೀಸ್).