ಶ್ರೀರಂಗಪಟ್ಟಣ ತಾಲೂಕಿನ ಗರುಡನಉಕ್ಕಡ ಗ್ರಾಮದಲ್ಲಿ ಗುರುವಾರ ಜಲಜೀವನ್ ಮಿಷನ್ ಯೋಜನೆಯಡಿ ನಿರ್ಮಾಣಗೊಂಡ ಜಿಲ್ಲೆಗೆ ಮೊದಲ ಕಾಮಗಾರಿಯಾಗಿ ಪೂರ್ಣಗೊಂಡ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಸುವ ಸೌಲಭ್ಯಕ್ಕೆ ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ಗ್ರಾಮಸ್ಥರ ಮನೆಗಳ ಮುಂದಿನ ಕೊಳಾಯಿ ತಿರುಗಿ ನೀರು ಕೊಡುವ ಮೂಲಕ ಚಾಲನೆ ನೀಡಿದರು. ಡಾ.ಕುಮಾರ, ಕೆ.ಆರ್.ನಂದಿನಿ, ಹರ್ಷಿತಾ, ಕವಿತಾ, ಬೋರಪ್ಪ, ರಜು, ಅಪ್ಪಾಜಿ, ನರಸಿಂಹಯ್ಯ ಇದ್ದರು. 
ನ್ಯೂಸ್

ಗರುಡನಉಕ್ಕಡ ಗ್ರಾಮಕ್ಕೆ ದಿನದ 24 ಗಂಟೆಯೂ ನೀರು

ಶ್ರೀರಂಗಪಟ್ಟಣ: ತಾಲೂಕಿನ ಗರುಡನಉಕ್ಕಡ ಗ್ರಾಮಕ್ಕೆ ಇನ್ಮುಂದೆ ಜಲಜೀವನ್ ಮಿಷನ್ 24*7 ಯೋಜನೆಯಡಿ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಗ್ರಾಮಸ್ಥರಿಗೆ ಲಭಿಸಲಿದ್ದು, ಇದು ಜಿಲ್ಲೆಗೆ ಮೊದಲ ಗ್ರಾಮವಾಗಿದ್ದು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ ಎಂದು ಶಾಸಕ ಹಾಗೂ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ತಾಲೂಕಿನ ಗರುಡನಉಕ್ಕಡ ಗ್ರಾಮದಲ್ಲಿ ಗುರುವಾರ ತಾಲೂಕು ಪಂಚಾಯಿತಿ, ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮಸ್ಥರ ಮನೆಗಳ ಮುಂದೆ ನಿರ್ಮಾಣವಾದ ಕೊಳಾಯಿಗಳಲ್ಲಿ ನೀರು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ಗರುಡನಉಕ್ಕಡ ಗ್ರಾಮದಲ್ಲಿ 85 ಕುಟುಂಬಗಳಿದ್ದು, 335 ಜನಸಂಖ್ಯೆ ಹೊಂದಿದೆ. ಕೇಂದ್ರ ಸರ್ಕಾರದ ಜಲಜೀವನ್ ಮಿಷನ್ ಯೋಜನೆಯಡಿ ಈಗ ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, 25 ಸಾವಿರ ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್ ಸ್ಥಾಪಿಸಿ ಇಲ್ಲಿನ ಪ್ರತಿ ಮನೆಗಳಿಗೂ ಪೈಪ್‌ಲೈನ್‌ನೊಂದಿಗೆ ಕೊಳಾಯಿ ಅಳವಡಿಸಿ ಸಂಪರ್ಕ ನೀಡಲಾಗಿದ್ದು, ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಬರುವ ಸೌಲಭ್ಯ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಮಹದೇವಪುರ ಬಹುಗ್ರಾಮ ಯೋಜನೆಯಡಿ ಕಾವೇರಿ ನದಿ ನೀರು ಪೂರೈಸಲಾಗುತ್ತಿದೆ. ಭೂಮಿಯಲ್ಲಿ ಗರಿಷ್ಠ ಸಮುದ್ರವಿದ್ದರೂ, ಕುಡಿಯುವ ಸಿಹಿ ನೀರಿನ ಲಭ್ಯತೆ ಅತ್ಯಂತ ಕನಿಷ್ಠದಲ್ಲಿದ್ದು, ಗ್ರಾಮಸ್ಥರು ಈ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಅವಶ್ಯಕತೆಗಷ್ಟೇ ಇತಿಮಿತಿಯಲ್ಲಿ ಬಳಸಿ ಶುದ್ಧ ನೀರನ್ನು ಪೋಲು ಮಾಡದೆ ಉಳಿಸಬೇಕು ಎಂದು ಸಲಹೆ ನೀಡಿದರು.

ಬಳಿಕ ಜಿಲ್ಲಾಧಿಕಾರಿ ಡಾ.ಕುಮಾರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಗ್ರಾಮದಲ್ಲಿನ ಕಾಮಗಾರಿ ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹರ್ಷಿತಾ, ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ಬೋರಪ್ಪ, ರಾಜು, ಅಪ್ಪಾಜಿ, ನರಸಿಂಹಯ್ಯ, ರಜಿನಿ, ಮಾಜಿ ಅಧ್ಯಕ್ಷೆ ಸುಮತಿ, ತಾಪಂ ಇಒ ವೇಣು, ಗ್ರಾಮೀಣ ಕುಡಿಯುವ ನೀರು ಉಪವಿಭಾಗದ ಎಇಇ ರಾಮಕೃಷ್ಣೇಗೌಡ, ಎಇ ರಾಕೇಶ್, ಜೆಜೆಎಂ ಜಿಲ್ಲಾ ಸಂಯೋಜಕ ಯೋಗೇಶ್ ಸೇರಿದಂತೆ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.