ಸಾಗರ: ಎಲ್ಲೆಂದರಲ್ಲಿ ಕಸ ಹಾಕದಂತೆ ಕಡಿವಾಣ ಹಾಕಲು ನಗರಸಭೆಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಆದರೆ ನಿರ್ವಹಣೆ ಸರಿಯಾಗಿರದ ಕಾರಣ ಮನಬಂದಂತೆ ಕಸ ಬಿಸಾಡಲಾಗುತ್ತಿದೆ ಎಂದು ನಗರಸಭೆ ಅಧಿಕಾರಿಗಳನ್ನು ಆಡಳಿತ ಮತ್ತು ವಿಪಕ್ಷದ ಸದಸ್ಯರು ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡರು.
ನಗರದ ವಿವಿಧೆಡೆ ಕಸ ಎಸೆಯುವ ಜಾಗಗಳಲ್ಲಿ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿದ್ದೀರಿ ಎಂದು ನಾಮಲಕ ಹಾಕಲಾಗಿದೆ. ಆದರೆ ಜನ ಅಲ್ಲಿಯೇ ಕಸ ಎಸೆಯುತ್ತಿದ್ದಾರೆ. ಕೆಲವೆಡೆ ನಾಮಲಕ ಹಾಕಲಾಗಿದೆ. ಆದರೆ ಅಲ್ಲಿ ಕ್ಯಾಮರಾಗಳೇ ಇಲ್ಲ. ಸುಮಾರು 7 ಲಕ್ಷ ರೂ. ವಾರ್ಷಿಕ ನಿರ್ವಹಣೆಗೆ ಬಳಕೆ ಮಾಡಲಾಗುತ್ತಿದೆ. ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದೀರಿ? ವಾಣಿಜ್ಯ ಮಳಿಗೆಗಳು ಸಹ ನಿರ್ವಹಣೆ ಇಲ್ಲದೆ ಹಾಳು ಬೀಳುತ್ತಿವೆ. ನಗರಸಭೆ ಆಸ್ತಿ ಕಾಪಾಡುವರ‌್ಯಾರು ಎಂದು ಆಡಳಿತ ಪಕ್ಷದ ಕೆ.ಆರ್.ಗಣೇಶ್‌ಪ್ರಸಾದ್ ಪ್ರಶ್ನಿಸಿದರು.
ಮಧುಮಾಲತಿ ಮಾತನಾಡಿ, ನಮ್ಮ ವಾರ್ಡ್‌ನಲ್ಲಿ ಸಿಸಿ ಕ್ಯಾಮರಾ ಕೆಳಗಡೆಯೇ ಕಸ ಎಸೆಯುತ್ತಿದ್ದಾರೆ. ಪದೇಪದೆ ಪೌರಕಾರ್ಮಿಕರನ್ನು ಕರೆದು ಸ್ವಚ್ಛ ಮಾಡಿದ್ದೇವೆ. ಮತ್ತೆ ಕಸ ಹಾಕಬಾರದು ಎಂದು ಸಗಣಿ ಸಾರಿಸಿ, ರಂಗೋಲಿ ಹಾಕಿ ಬಂದಿದ್ದೇನೆ. ಆದರೂ ಕಸ ಎಸೆಯುವುದು ನಿಂತಿಲ್ಲ. ಸಿಸಿ ಕ್ಯಾಮರಾ ಪ್ರದರ್ಶನಕ್ಕೆ ಹಾಕಿದಂತೆ ಆಗಿದೆ. ಸಿಸಿ ಕ್ಯಾಮರಾ ಕಾರ್ಯನಿರ್ವಹಿಸದೇ ಇರುವ ವಿಚಾರ ಗುಟ್ಟಾಗಿ ಉಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಶಂಕರ್, ಸರೋಜಮ್ಮ, ಕುಸುಮಾ ಸುಬ್ಬಣ್ಣ ದನಿಗೂಡಿಸಿದರು.
ಟಿ.ಡಿ.ಮೇಘರಾಜ್ ಮಾತನಾಡಿ, ಕಸ ಹಾಕಬಾರದು ಎಂದು ಸಿಸಿ ಕ್ಯಾಮರಾ ಹಾಕಿದೆ. ಪ್ರಯೋಜನವಾಗಿಲ್ಲ ಎಂದಾದರೆ ಕ್ಯಾಮರಾ ಏಕೆ ಹಾಕಿದ್ದೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ನಾಗಪ್ಪ, ಕಸ ಎಸೆದು ಹೋಗುವವರ ವಿರುದ್ಧ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ. ವಾಹನಗಳನ್ನು ಸೀಜ್ ಮಾಡಿದ್ದೇವೆ. ನಗರದ 63 ಕಡೆಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಕಸ ಎಸೆಯುವವರ ವಿರುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಉಪಾಧ್ಯಕ್ಷೆ ಸವಿತಾ ವಾಸು, ನಗರಸಭೆ ಅಧಿಕಾರಿಗಳು ಹಾಜರಿದ್ದರು.