ಕಾನ್ಪುರ: ಸ್ಮಾರ್ಟ್ಫೋನ್ ಯುಗದಲ್ಲಿ ರೀಲ್ಸ್ ಹಾವಳಿ ಹೆಚ್ಚುತ್ತಿದ್ದು, ಜನ ವೈರಲ್ ಆಗುದವ ಭರದಲ್ಲಿ ಇನ್ನಿಲ್ಲದ ಕೆಲಸಗಳಿಗೆ ಕೈ ಹಾಕಿ ಪೇಚಿಗೆ ಸಿಲುಕುತ್ತಾರೆ. ಇದೀಗ ಉತ್ತರಪ್ರದೇಶದ ಕಾನ್ಪುರದಲ್ಲಿ ಗ್ಯಾಂಗ್ಸ್ಟರ್ ಒಬ್ಬ ತನ್ನ ಗರ್ಲ್ಫ್ರೆಂಡ್ (Girlfriend) ಜನುಮದಿನವನ್ನು ಡಿಸಿಪಿ ಕಚೇರಿ ಎದುರು ಆಚರಿಸಿ ಪೊಲೀಸರಿಗೆ ಸವಾಲ್ ಎಸೆದಿರುವ ಘಟನೆ ನಡೆದಿದ್ದು, ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಕಾನ್ಪುರದ ಬರ್ರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಡಿಸಿಪಿ ಕಚೇರಿ ಎದುರು ಗ್ಯಾಂಗ್ಸ್ಟರ್ ಓರ್ವ 12 ಬೆಂಗಾವಲು ವಾಹನಗಳೊಂದಿಗೆ ಕಾರುಗಳನ್ನು ಅಪಾಯಕಾರಿಯಾಗಿ ಚಲಾಯಿಸಿ ಗರ್ಲ್ಫ್ರೆಂಡ್ (Girlfriend) ಜನುಮದಿನವನ್ನು ಆಚರಿಸಿ ಉದ್ಧಟತನ ಮೆರೆದಿದ್ದಾನೆ. ವಿಡಿಯೋದಲ್ಲಿ ಸೆರೆಯಾಗಿರುವ ವಾಹನಗಳಲ್ಲಿ ನಂಬರ್ ಪ್ಲೇಟ್ ಅಳವಡಿಸದೆ ಇರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಅಪಾಯಕಾರಿ ಸ್ಟಂಟ್ ಮಾಡಿರುವ ಕುಖ್ಯಾತ ಗ್ಯಾಂಗ್ಸ್ಟರ್ ಹೆಸರಿ ತಿಳಿದು ಬಂದಿಲ್ಲವಾದರೂ ಕಪ್ಪು ಬಣ್ಣದ ಸ್ಕಾರ್ಪಿಯೋ ಡ್ರೈವ್ ಮಾಡುತ್ತಿರುವುದನ್ನು ನೋಡಬಹುದಾಗಿದೆ. ಆತನ ಪಕ್ಕದಲ್ಲಿ ಹುಡುಗಿಯೊಬ್ಬಳು (GirlFriend) ಕುಳಿತುಕೊಂಡಿದ್ದು, ಆತ ಯಾವುದೇ ಭಯವಿಲ್ಲದೇ ಡ್ರೈವಿಂಗ್ ಮಾಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ಕಾಣಬಹುದಾಗಿದೆ.
ಈ ಕುರಿತು ಮಾತನಾಡಿರುವ ಕಾನ್ಪುರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆತ ಅಪರಾಧಿಯಾಗಿದ್ದು, ಅತ್ಯಾಚಾರ ಪ್ರಕರಣಗಳಲ್ಲಿಯೂ ಈತನನ್ನು ಬಂಧಿಸಲಾಗಿತ್ತು. ಆತನ ವಿರುದ್ಧ ಗ್ಯಾಂಗ್ಸ್ಟರ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಕಾನ್ಪುರ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.