Global Chess League: ಗಂಗಾಸ್ ಗ್ರಾಂಡ್ಮಾಸ್ಟರ್ಸ್ ತಂಡ ಚಾಂಪಿಯನ್
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ವಿಶ್ವ ನಂ. 1 ಆಟಗಾರ ಮ್ಯಾಗ್ನೆಸ್ ಕಾರ್ಲ್ಸೆನ್ ಸಾರಥ್ಯದ ಹಾಲಿ ಚಾಂಪಿಯನ್ ಅಲ್ಪೈನ್ ಪೈಪರ್ಸ್ ತಂಡಕ್ಕೆ ಸೋಲುಣಿಸಿದ ಗಂಗಾಸ್ ಗ್ರಾಂಡ್ಮಾಸ್ಟರ್ಸ್ ತಂಡ 4ನೇ ಆವೃತ್ತಿಯ ಗ್ಲೋಬಲ್ ಚೆಸ್ ಲೀಗ್ನಲ್ಲಿ (Global Chess League) ಪ್ರಶಸ್ತಿ ಒಲಿಸಿಕೊಂಡಿದೆ.
ಉದ್ಯಾನನಗರಿಯ ಲಲಿತ್ ಅಶೋಕಾ ಹೋಟೆಲ್ನಲ್ಲಿ ಭಾನುವಾರ ಮುಕ್ತಾಯಗೊಂಡ ಟೂರ್ನಿಯ ಫೈನಲ್ನ ಮೊದಲ ಸುತ್ತಿನಲ್ಲಿ ಗಂಗಾಸ್-ಅಲ್ಪೈನ್ ತಂಡಗಳು 3-3ರಿಂದ ಸಮಬಲ ಸಾಧಿಸಿದವು. ಬಳಿಕ 2ನೇ ಸುತ್ತಿನಲ್ಲಿ ಗಂಗಾಸ್ ತಂಡ 4-2ರಿಂದ ಜಯಿಸಿತು. ಬಿಳಿ ಕಾಯಿಯೊಂದಿಗೆ ಆಡಿದ ಕಾರ್ಲ್ಸೆನ್, ಗಂಗಾಸ್ನ ಐಕಾನ್ ಆಟಗಾರ ಇಯಾನ್ ನೆಪೊಮ್ನಿಯಾಚಿ ವಿರುದ್ಧ ಆಘಾತಕಾರಿ ಸೋಲುಂಡರು. ಕೊನೆರು ಹಂಪಿ ಕೂಡ ಪರಾಭವಗೊಂಡರು. ಉಳಿದ 4 ಪಂದ್ಯಗಳು ಡ್ರಾಗೊಂಡವು.
ಅಮೆರಿಕನ್ ಗ್ಯಾಂಬಿಟ್ಸ್ಗೆ 3ನೇ ಸ್ಥಾನ: ಕ್ಯಾಂಡಿಡೇಟ್ಸ್ ಟೂರ್ನಿ ವಿಜೇತ ಜಾವೊಖಿರ್ ಸಿಂಡರೋವ್ ಸಾರಥ್ಯದ ಅಮೆರಿಕನ್ ಗ್ಯಾಂಬಿಟ್ಸ್ ತಂಡ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಚೆಕ್ ಮುಂಬಾ ಮಾಸ್ಟರ್ಸ್ ವಿರುದ್ಧ ಎರಡೂ ಸುತ್ತಿನಲ್ಲಿ ಜಯ ಸಾಧಿಸಿತು. ಮೊದಲ ಸುತ್ತಿನಲ್ಲಿ 3.5-2.5 ಮತ್ತು 2ನೇ ಸುತ್ತಿನಲ್ಲಿ 4-2ರಿಂದ ಗೆಲುವು ದಾಖಲಿಸಿತು. ಗ್ಯಾಂಬಿಟ್ಸ್ ಪರ ಭಾರತದ ನಿಹಾಲ್ ಸರಿನ್ ಎರಡೂ ಸುತ್ತಿನಲ್ಲಿ ಗೆದ್ದು ಮಿಂಚಿದರು.
ಗಂಗಾಸ್ ಆಟಗಾರ್ತಿ ಸ್ಟಾವ್ರೌಲಾ ತ್ಸೋಲಾಕಿಡೌ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಅವರು ಟೂರ್ನಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 3ರಲ್ಲಿ ಸಾಧಿಸಿ ಒಟ್ಟು 21.5 ಅಂಕ ಗಳಿಸಿದರು. ಮುಂಬಾ ಪರ ಆಡಿದ ಭಾರತದ ಡಿ. ಹರಿಕಾ ಟೂರ್ನಿಯಲ್ಲಿ ಒಂದೂ ಪಂದ್ಯ ಸೋಲದ ಸಾಧನೆ ಮಾಡಿದರು. ಅವರು 12 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 8ರಲ್ಲಿ ಡ್ರಾ ಸಾಧಿಸಿದರು. 9 ದಿನಗಳ ಟೂರ್ನಿಯ ಎಲ್ಲ ದಿನವೂ ಬೆಂಗಳೂರಿನ ಚದುರಂಗ ಪ್ರೇಮಿಗಳು "ಹೌಸ್ಫುಲ್' ಆಗಿದ್ದರು.
ಚಾಂಪಿಯನ್ ಗಂಗಾಸ್ ತಂಡ 2.38 ಕೋಟಿ ರೂ. ಬಹುಮಾನ ಜಯಿಸಿತು. ರನ್ನರ್ಅಪ್ ಅಲ್ಪೈನ್ ತಂಡ 1.19 ಕೋಟಿ ರೂ., ತೃತೀಯ ಸ್ಥಾನಿ ಗ್ಯಾಂಬಿಟ್ಸ್ 71.66 ಲಕ್ಷ ರೂ., 4ನೇ ಸ್ಥಾನಿ ಚೆಕ್ ಮುಂಬಾ 47.77 ಲಕ್ಷ ರೂ. ಗಳಿಸಿತು.