ನ್ಯೂಸ್

ನರಭಕ್ಷಕ ಚಿರತೆ ಸೆರೆಗೆ ಆನೆಗಳ ನೆರವು, ಸಕ್ರೆಬೈಲ್ ಶಿಬಿರದಿಂದ ಗಜಪಡೆ ಆಗಮನ

ಸಾಗರ, ಕುಂತಿಗೆ ಪತ್ತೆ ಜವಾಬ್ದಾರಿ

ಗಂಗಾವತಿ: ಆನೆಗೊಂದಿ, ವಿರುಪಾಪುರಗಡ್ಡಿ, ಸಂಗಾಪುರ, ಹನುಮನಹಳ್ಳಿ ಬಳಿ ಚಿರತೆಗಳ ಹಾವಳಿ ಹೆಚ್ಚಿದ್ದರಿಂದ ನರಭಕ್ಷಕನ ಸೆರೆಗೆ ಸಕ್ರೆಬೈಲ್ ಆನೆಗಳ ನೆರವು ಪಡೆದಿದ್ದು, ತಾಲೂಕಿನ ವಿರುಪಾಪುರಗಡ್ಡಿ ಬೆಟ್ಟ ಪ್ರದೇಶದಲ್ಲಿ ತಜ್ಞರ ತಂಡ ಭಾನುವಾರ ಕಾರ್ಯಾಚರಣೆ ಆರಂಭಿಸಿದೆ.

ಚಿರತೆ ಸೆರೆಗಾಗಿ ಬೋನ್ ಇಟ್ಟಿದ್ದರೂ ಪ್ರಯೋಜನವಾಗಿಲ್ಲ. ಚಿರತೆ ಚಲವಲನ ಅರಿಯಲು ಶಿವಮೊಗ್ಗದ ಸಕ್ರೆಬೈಲ್ ಆನೆ ಶಿಬಿರದಿಂದ ಎರಡು ಆನೆ ಮತ್ತು 20 ಜನರನ್ನೊಳಗೊಂಡ ತಂಡನ್ನು ಕರೆಯಿಸಲಾಗಿದೆ. ಮನುಷ್ಯರನ್ನು ಬಲಿ ಪಡೆದ ಜಾಗದಲ್ಲಿ ಆನೆ ತಂಡ ಸಂಚರಿಸುತ್ತಿದ್ದು, ಇನ್ನೆರಡು ದಿನ ಕಾರ್ಯಾಚರಣೆ ಮುಂದುವರೆಯಲಿದೆ.

ಜವಾಬ್ದಾರಿ: ಚಿರತೆ ಚಲವಲನದ ಬಗ್ಗೆ ಮಾಹಿತಿ ಪಡೆಯುವ ಜವಾಬ್ದಾರಿಯನ್ನು 35 ವರ್ಷದ ಕುಂತಿ ಮತ್ತು 32 ವರ್ಷದ ಸಾಗರ ಆನೆಗೆ ವಹಿಸಿದ್ದು, ಮೊದಲ ದಿನ 10 ಕಿ.ಮೀ. ಸಂಚರಿಸಿವೆ. ಚಿರತೆ ವಾಸನೆ ಗ್ರಹಿಸಿ ಸ್ಥಳ ಗುರುತಿಸುವ ಸಾಮರ್ಥ್ಯ ಹೊಂದಿದ್ದು, ವಿವಿಧೆಡೆ ಕಾರ್ಯಾಚರಣೆ ನಡೆಸಿವೆ.

ಬೆಟ್ಟದ ಗವಿಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಬೆಟ್ಟದತ್ತ ತೆರಳಲು ಆನೆಗಳಿಗೆ ಆಗುತ್ತಿಲ್ಲ. ತಂಡದಲ್ಲಿ ಐವರು ಕಾವಾಡಿಗರು, ಮಾವುತರೂ, ವೈದ್ಯ ಮತ್ತು ಸಹಾಯಕರಿದ್ದು, ಸ್ಥಳೀಯ ಅರಣ್ಯ ರಕ್ಷಕರೂ ಸಾಥ್ ನೀಡಿದ್ದಾರೆ. ಆನೆ ಮೇಲಿರುವ ಅರವಳಿಕೆ ಚುಚ್ಚುಮದ್ದಿನೊಂದಿಗೆ ತಜ್ಞರ ತಂಡ ಅರಣ್ಯ ಪ್ರದೇಶಕ್ಕೆ ತೆರಳಿದ್ದು, ಸೂಕ್ಷ್ಮ ಪ್ರದೇಶದಲ್ಲಿ ನಿಗಾವಹಿಸಿದ್ದಾರೆ.

ಆನೆಗಳ ತಂಡ ಮುಖ್ಯಸ್ಥ ಜಲೀಲ್ ಅಹ್ಮದ್, ಸಹಾಯಕರಾದ ಪ್ರತಾಪ, ಚಂದನ್, ಕಾವಾಡಿಗಳಾದ ಇಮ್ತಿಯಾಜ್, ಶೇಖರ್ ಹುಸೇನ್ ಜಬೀವುಲ್ಲಾ, ಮೇಹರಾಜ್, ಸಿದ್ಧಿಕ್ ಪಾಶಾ, ಮಹ್ಮದ್ ಖಲೀಲ, ಅರಣ್ಯ ರಕ್ಷಕರಾದ ಶ್ರೀನಿವಾಸ ಮೂಲೇರ್, ರಾಮಣ್ಣ ಇತರರಿದ್ದರು.

ಚಿರತೆಗಳ ಸಂತತಿ ಹೆಚ್ಚಾಗಿವೆ : ಆನೆಗೊಂದಿ ಮತ್ತು ಹಂಪಿ ಭಾಗದಲ್ಲಿ ಚಿರತೆಗಳ ಸಂತತಿ ಹೆಚ್ಚಿದ್ದು, ನರಭಕ್ಷಕ ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಸಲಾಗಿದೆ ಎಂದು ಬಳ್ಳಾರಿ ವಲಯ ಮುಖ್ಯ ಅರಣ್ಯ ಸಂರಕ್ಷಕ ಎಸ್.ಎಸ್.ಲಿಂಗರಾಜ್ ಹೇಳಿದರು.