ಬೆಂಗಳೂರು: ಫೇಸ್‌ಬುಕ್, ಬ್ಯಾಂಕ್‌ನಲ್ಲಿ ನಕಲಿ ಖಾತೆ ತೆರೆದು ಸೈಬರ್ ವಂಚನೆ ಮಾಡುತ್ತಿದ್ದ 7 ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರು ಮೂಲದ ಖಾಸೀಫ್, ಅಜರುದ್ದೀನ್, ಮುದಾಸೀರ್, ಸೈಯ್ಯದ್ ಡ್ಯಾನಿಶ್, ಶಶಿಕುಮಾರ್, ಇಮ್ತಿಯಾಜ್ ಮತ್ತು ಶಫಿವುಲ್ಲಾ ಷರೀಫ್ ಬಂಧಿತರು. ಆನೇಕಲ್‌ನ ಶಿಡ್ಲಘಟ್ಟದ ಸೈಯ್ಯದ್ ಡ್ಯಾನೀಶ್ ಹೊರತುಪಡಿಸಿದರೆ ಉಳಿದವರು ಮೈಸೂರು ಮತ್ತು ಸುತ್ತಲ ನಿವಾಸಿಗಳು. ಆಡುಗೋಡಿಯ ಮೊಹಮ್ಮದ್ ಕಾಶಿಫ್ ಎಂಬಾತನಿಗೆ ಆತನ ಸ್ನೇಹಿತನ ಸೋಗಿನಲ್ಲಿ ಫೇಸ್‌ಬುಕ್ ಖಾತೆ ತೆರೆದು 1.50 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ ಮಾಡಿದ್ದರು. ಬಂಧಿತರಿಂದ 9 ಮೊಬೈಲ್, 11 ಬ್ಯಾಂಕ್ ಪಾಸ್‌ಬುಕ್, 6 ಚೆಕ್ ಬುಕ್, 31 ಎಟಿಎಂ ಕಾರ್ಡ್, 9 ಆಧಾರ್ ಕಾರ್ಡ್ ಜಪ್ತಿ ಮಾಡಲಾಗಿದೆ ಎಂದು ಆಗ್ನೇಯ ವಿಭಾಗ ಡಿಸಿಪಿ ಸಾ.ರಾ. ಫಾತಿಮಾ ಮಾಹಿತಿ ನೀಡಿದ್ದಾರೆ.
ದೂರುದಾರ ಮೊಹಮ್ಮದ್ ಕಾಶಿಫ್‌ಗೆ ಜನವರಿ 7ರಂದು ಅವರ ಸ್ನೇಹಿತನ ಹೆಸರು, ಫೋಟೋ ಹೊಂದಿದ್ದ ಫೇಸ್‌ಬುಕ್ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ನಿಜವೆಂದು ನಂಬಿದ್ದ ಕಾಶಿಫ್, ಫ್ರೆಂಡ್ಸ್ ರಿಕ್ವೆಸ್ಟ್ ಅಕ್ಸೆಪ್ಟ್ೃ ಮಾಡಿದ್ದರು.
ಕೆಲ ಹೊತ್ತಿನ ಬಳಿಕ ಅದೇ ಖಾತೆಯಿಂದ ‘ನಾನು ದುಬೈನಲ್ಲಿದ್ದು, ಶೀಘ್ರದಲ್ಲಿ ಭಾರತಕ್ಕೆ ಬರಲಿದ್ದೇನೆ. ನನ್ನ ಬಳಿ ಸಾಕಷ್ಟು ಹಣ ಇದ್ದು, ಭಾರತಕ್ಕೆ ತೆಗೆದುಕೊಂಡು ಬಂದರೆ ಹೆಚ್ಚಿನ ತೆರಿಗೆ ಪಾವತಿ ಮಾಡಬೇಕು. ಆದ್ದರಿಂದ ಆ ಹಣವನ್ನು ನಿನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿರುತ್ತೇನೆ.
ಬೆಂಗಳೂರಿಗೆ ಬಂದ ನಂತರ ಮರಳಿ ಪಡೆಯುತ್ತೇನೆ’ ಎಂದು ಮೆಸೇಜ್ ಮಾಡಿದ್ದ. ಸ್ನೇಹಿತನೇ ಇರಬಹುದು ಎಂದು ನಂಬಿದ್ದ ಕಾಶಿಫ್, ತಮ್ಮ ಬ್ಯಾಂಕ್ ಖಾತೆ ನಂಬರ್ ನೀಡಿದ್ದರು. ಬಳಿಕ ಬ್ಯಾಂಕ್ ಖಾತೆಗೆ 7.85 ಲಕ್ಷ ರೂ. ವರ್ಗಾಯಿಸಿದಂತೆ ನಕಲಿ ರಸೀದಿ ಕಳುಹಿಸಿದ್ದ ಕಳ್ಳರು, 24 ಗಂಟೆಗಳಲ್ಲಿ ಖಾತೆಗೆ ಕ್ರೆಡಿಟ್ ಆಗಲಿದೆ ನಂಬಿಸಿದ್ದರು.
ಮರು ದಿನ ಮತ್ತೊಂದು ಸಂದೇಶ ಕಳುಹಿಸಿ ‘ನಾನು ಸೌದಿ ಅರೇಬಿಯಾದ ಪೊಲೀಸ್ ಠಾಣೆಯಲ್ಲಿ ತೊಂದರೆಗೆ ಸಿಲುಕಿದ್ದೇನೆ. ತುರ್ತಾಗಿ 1.50 ಲಕ್ಷ ರೂ. ಅವಶ್ಯಕತೆ ಇದೆ. ಆ ಹಣವನ್ನು ಓರ್ವ ಬ್ಯಾಂಕ್ ಖಾತೆಗೆ ಕಳುಹಿಸುವಂತೆ’ ಮೆಸೇಜ್ ಮಾಡಿದ್ದ. ಹೇಗಿದ್ದರು ಸ್ನೇಹಿತನದ್ದೇ ಹಣ, ಆತನೇ ಕೇಳುತ್ತಿದ್ದಾನೆ ಎಂದು ಭಾವಿಸಿದ್ದ ಕಾಶಿಫ್, ತನ್ನ ಬಳಿಯಿದ್ದ ಹಣವನ್ನು ಆರೋಪಿಗಳು ತಿಳಿಸಿದ್ದ ಖಾತೆಗೆ ವರ್ಗಾಯಿಸಿದ್ದರು.
ಆದರೆ 24 ಗಂಟೆ ಆದರೂ ಆರೋಪಿ ಕಳುಹಿಸಿದ್ದ ಹಣ ಜಮೆ ಆಗದೆ ಇದ್ದಾಗ ಗಾಬರಿಗೊಂಡು ವಾಪಸ್ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಕ್ಕಿಲ್ಲ. ಕೊನೆಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಕಾಶಿಫ್ ಆಡುಗೋಡಿ ಠಾಣೆಗೆ ದೂರು ನೀಡಿದ್ದರು.
ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಇನ್‌ಸ್ಪೆಕ್ಟರ್ ಸಿ. ರವಿಕುಮಾರ್ ನೇತೃತ್ವದ ತಂಡ ಆರೋಪಿಗಳು ಕೊಟ್ಟಿದ್ದ ಬ್ಯಾಂಕ್ ಖಾತೆ ವಿವರ ಜಾಲಾಡಿದಾಗ ಮೈಸೂರಿನಲ್ಲಿ ಬ್ಯಾಂಕ್‌ಯೊಂದರ ಖಾತೆ ಆಗಿರುತ್ತದೆ. ಅದರ ಜಾಡು ಹಿಡಿದಾಗ ಆರೋಪಿಗಳು ಒಬ್ಬೊಬ್ಬರಾಗಿ ಪತ್ತೆಯಾಗಿದ್ದಾರೆ ಎಂದು ಡಿಸಿಪಿ ಸಾ.ರಾ. ಫಾತಿಮಾ ಮಾಹಿತಿ ನೀಡಿದ್ದಾರೆ.