ಬಾಳೆಹೊನ್ನೂರು: ಪಟ್ಟಣದ ವಿದ್ಯಾಗಣಪತಿ ಸೇವಾ ಸಮಿತಿಯಿಂದ ಆಯೋಜಿಸಿರುವ ಗಣೇಶೋತ್ಸವದ ಸಭಾ ಮಂಟಪಕ್ಕೆ ಶುಕ್ರವಾರ ಜಿಲ್ಲಾ ರಕ್ಷಣಾಧಿಕಾರಿ ಡಾ.ವಿಕ್ರಮ್ ಅಮಟೆ ಭೇಟಿ ನೀಡಿ ಪರಿಶೀಲಿಸಿದರು.
ಎಸ್‌ಪಿ ಅವರು ವಿದ್ಯಾಗಣಪತಿ ಸಮಿತಿ ಸದಸ್ಯರೊಂದಿಗೆ ಗಣೇಶೋತ್ಸವ ಕಾರ್ಯಕ್ರಮಗಳ ವಿವರ ಪಡೆದರು. ಸೆ.30ರಂದು ನಡೆಯಲಿರುವ ಸಮಾರೋಪ ಹಾಗೂ ಅ.1ರಂದು ನಡೆಯಲಿರುವ ವಿಸರ್ಜನಾ ಮಹೋತ್ಸವದ ಕುರಿತು ಸಮಿತಿ ಕೈಗೊಂಡಿರುವ ಸಲಹೆಗಳ ಕುರಿತು ಚರ್ಚಿಸಿದರು.
ಸೆ.30, ಅ.1ರಂದು ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್‌ನ ಅಗತ್ಯವಿದೆ. ಪಾರ್ಕಿಂಗ್, ವಾಹನ, ಜನ ಸಂಚಾರಕ್ಕೆ ವ್ಯವಸ್ಥೆ ಕೈಗೊಳ್ಳಬೇಕಿದೆ. ಸಮಿತಿಯ ಪದಾಧಿಕಾರಿಗಳು ಪೊಲೀಸರೊಂದಿಗೆ ಕೈಜೋಡಿಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು. ಮೆರವಣಿಗೆ ಸಂಚರಿಸುವ ಮಾರ್ಗದ ಕುರಿತು ಪೊಲೀಸ್ ಇಲಾಖೆಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದರು.
ಪಿಎಸ್‌ಐ ವಿ.ಟಿ.ದಿಲೀಪ್‌ಕುಮಾರ್, ವಿದ್ಯಾಗಣಪತಿ ಸಮಿತಿ ಅಧ್ಯಕ್ಷ ಟಿ.ಆರ್.ಧರ್ಮಪ್ಪಗೌಡ, ಕಾರ್ಯದರ್ಶಿ ಸಿ.ವಿ.ಸುನೀಲ್, ಸುರೇಂದ್ರ, ಪದಾಧಿಕಾರಿಗಳಾದ ಟಿ.ಎಂ.ಉಮೇಶ್, ಸುಧಾಕರ್, ಕೆ.ಎಸ್.ಹರೀಶ್, ನಾರಾಯಣಗೌಡ, ಸದಾಶಿವ, ಎಂ.ಆರ್.ರವಿ, ಶ್ರೀಕೃಷ್ಣಭಟ್, ನಿಖಿಲ್ ಇತರರಿದ್ದರು