ಶಿವಮೊಗ್ಗ ಗಾಂಧಿ ಬಜಾರ್ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಗೌರಿಗೆ ಮಹಿಳೆಯರು ಬಾಗಿನ ಸಮರ್ಪಿಸಿದರು.  
ನ್ಯೂಸ್

ಶಿವಮೊಗ್ಗ ಜಿಲ್ಲೆಯಲ್ಲಿ ಗಣೇಶೋತ್ಸವದ ಸಂಭ್ರಮ

ಶಿವಮೊಗ್ಗ: ಕೈಕೊಟ್ಟ ಮುಂಗಾರು, ಇಡೀ ಜಿಲ್ಲೆಯಲ್ಲಿ ಬರದ ಛಾಯೆ. ಇದರ ನಡುವೆಯೂ ವಿಘ್ನ ವಿನಾಶಕನ ಆರಾಧನೆಗೆ ಚ್ಯುತಿ ಬರಲಿಲ್ಲ. ವಿವಿಧೆಡೆ ಸೋಮವಾರದಿಂದ ಸಾರ್ವಜನಿಕವಾಗಿ ಗೌರಿ-ಗಣೇಶ ಹಬ್ಬವನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತಿದೆ.

ಸೋಮವಾರ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿಗಳ ಪೈಕಿ ಹಲವು ಮೂರ್ತಿಗಳನ್ನು ಅಂದೇ ವಿಸರ್ಜಿಸಲಾಯಿತು. ಜಿಲ್ಲೆಯಲ್ಲಿ ಈ ಬಾರಿ ಸ್ಥಳೀಯ ಆಡಳಿತದ ಅನುಮತಿ ಮೇರೆಗೆ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲ್ಪಟ್ಟಿರುವ ಮೂರ್ತಿಗಳ ಸಂಖ್ಯೆ 3,332 ಮೊದಲ ದಿನ ವಿಜೃಂಭಣೆಯ ರಾಜಬೀದಿ ಉತ್ಸವದೊಂದಿಗೆ 400ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಯಿತು. ಮೂರನೇ ದಿನವಾದ ಸೆ.20ರಂದು ಸಾವಿರಕ್ಕೂ ಹೆಚ್ಚು ಮೂರ್ತಿಗಳನ್ನು ವಿಸರ್ಜನೆ ಮಾಡಲಾಗುತ್ತದೆ.

ಶಿವಮೊಗ್ಗ ನಗರದ ವಿವಿಧೆಡೆ ಪ್ರತಿಷ್ಠಾಪಿಸಿರುವ ನಾನಾ ವಿಧದ ಗಣೇಶ ಮೂರ್ತಿಗಳು ಸಾರ್ವಜನಿಕರ ಗಮನಸೆಳೆಯುತ್ತಿವೆ. ಅನೇಕ ವೃತ್ತಗಳಲ್ಲಿ ಕೇಸರಿ ಬಂಟಿಂಗ್ಸ್‌ಗಳು ರಾರಾಜಿಸುತ್ತಿವೆ. ಗಣೇಶ ಮೂರ್ತಿ ಪ್ರತಿಷ್ಠಾಪಿಸಿರುವ ಬೀದಿ ಸಂಪೂರ್ಣ ಕೇಸರಿಮಯವಾಗಿದೆ.
ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಸಾರ್ವಜನಿಕ ಗಣೇಶೋತ್ಸವದ ಮೇಲೆ ನಿಗಾ ವಹಿಸಲಾಗಿದೆ. ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಯಾವುದೇ ಗೊಂದಲ, ವಾಗ್ವಾದಕ್ಕೆ ಅವಕಾಶ ನೀಡದಂತೆ ಸಮಿತಿ ಪ್ರಮುಖರಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಬಂದೋಬಸ್ತ್‌ನ ಪರಿಶೀಲನೆಗಾಗಿ ಗಸ್ತು ತಿರುಗುತ್ತಿದ್ದಾರೆ.
ಗಲ್ಲಿಗಲ್ಲಿಗಳಲ್ಲೂ ಗಣೇಶನ ಆರಾಧನೆ ಶ್ರದ್ಧಾ-ಭಕ್ತಿಯಿಂದ ನಡೆಯುತ್ತಿದೆ. ಮೈಕಾಸುರನ ಆರ್ಭಟಕ್ಕೆ ಪೊಲೀಸರು ಒಂದಷ್ಟು ಕಡಿವಾಣ ಹಾಕಿದ್ದಾರೆ. ಕೆಲವೆಡೆ ಗಣೇಶ ಉತ್ಸವ ಕೇವಲ ನೆಪ ಮಾತ್ರಕ್ಕೆ ಎಂಬಂತಾಗಿದೆ. ಮೋಜು ಮಸ್ತಿಗೆ ಉತ್ಸವ ಕಾರಣವಾಗುತ್ತಿದೆ.
ಒಟ್ಟಾರೆ ನಗರದ ವಿವಿಧೆಡೆ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳು ಈಗ ಎಲ್ಲರ ಗಮನವನ್ನು ತಮ್ಮತ್ತ ಸೆಳೆಯುತ್ತಿವೆ. ಸಂಜೆ ವೇಳೆ ಅನೇಕರು ಕುಟುಂಬ ಸಮೇತರಾಗಿ ತೆರಳಿ ಗಣಪತಿ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.